ನ.7ರಿಂದ 9ರವರೆಗೆ 'ಸಹ್ಯಾದ್ರಿಯಲ್ಲಿ ಸಿನರ್ಜಿಯಾ-2024'
9ರಂದು ಏರ್ ಶೋ: ಏರೋಬ್ಯಾಟಿಕ್, ಸ್ಕೈ ಡೈವಿಂಗ್ ಪ್ರದರ್ಶನ
ಮಂಗಳೂರು, ನ.4: ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ ಮೆಂಟ್ ವತಿಯಿಂದ ನ.7ರಿಂದ 9ರ ವರೆಗೆ ಕಾಲೇಜಿನ ಕ್ಯಾಂಪಸ್ ನಲ್ಲಿ ‘ಸಿನೆರ್ಜಿಯಾ 2024’ನ್ನು ಹಮ್ಮಿಕೊಳ್ಳಲಾಗುತ್ತಿದೆ. ನ.9ರಂದು ಬೆಳಗ್ಗೆ 9:30ರಿದ 10:30ರ ವರೆಗೆ ಸಾರ್ವಜನಿಕರಿಗೂ ವೀಕ್ಷಣೆಗೆ ಲಭ್ಯವಾಗುವಂತೆ ಏರ್ ಶೋ ಆಯೋಜಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಎಸ್.ಇಂಜಗನೇರಿ ತಿಳಿಸಿದ್ದಾರೆ.
ನಗರದ ಪ್ರೆಸ್ ಕ್ಲಬ್ ನಲ್ಲಿ ಸೋಮವಾರ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ ಅವರು, 200ಕ್ಕೂ ಅಧಿಕ ಶಾಲಾ ಕಾಲೇಜುಗಳಿಂದ 5,000ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದವರು ಹೇಳಿದರು.
ನ.7ರಂದು ಬೆಳಗ್ಗೆ 10ಕ್ಕೆ ‘ಸಿನೆರ್ಜಿಯಾ 2024’ಕ್ಕೆ ಉದ್ಘಾಟನೆಗೊಳ್ಳಲಿದ್ದು, ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ರುದ್ರಪ್ಪ ಪಾಟೀಲ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲೆ ರಾಜಲಕ್ಷ್ಮಿ ಸೇರಿದಂತೆ ವಿವಿಧ ಸಂಸ್ಥೆಗಳ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ಐಐಟಿ ಮತ್ತು ಎನ್ ಐಟಿಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಅದೇ ಮಾದರಿಯಲ್ಲಿ ಸಹ್ಯಾದ್ರಿಯಲ್ಲಿ ಸಿನೆರ್ಜಿಯಾವನ್ನು ಆಯೋಜಿಸಲಾಗುತ್ತಿದೆ. ಯುವ ಪ್ರತಿಭೆಗಳಿಗೆ ವಿಜ್ಞಾನ, ತಂತ್ರಜ್ಞಾನ ಮತ್ತು ಉದ್ಯಮಶೀಲತೆಯ ಅತ್ಯಾಧುನಿಕ ಕ್ಷೇತ್ರಗಳಲ್ಲಿ ತೊಡಿಸಿಕೊಳ್ಳಲು ವೇದಿಕೆಯನ್ನು ಕಲ್ಪಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಕಾರ್ಯಕ್ರಮದ ಪ್ರಮುಖ ಅಂಶ ಸಹ್ಯಾದ್ರಿ ಸೈನ್ಸ್ ಟ್ಯಾಲೆಂಟ್ ಹಂಟ್ (ಎಸ್ ಎಸ್ ಟಿಎಚ್) 11ನೇ ಆವೃತ್ತಿಯಾಗಿದೆ. ವಿವಿಧ ಪ್ರೌಢಶಾಲಾ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳ ನವೀನ ವೈಜ್ಞಾನಿಕ ಮಾದರಿಗಳಿಗೆ ತಾಂತ್ರಿಕ ಪರಿಹಾರವನ್ನು ಕಲ್ಪಿಸಿ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವುದಾಗಿದೆ ಎಂದವರು ವಿವರಿಸಿದರು.
ಇದಕ್ಕಾಗಿ ಸಹ್ಯಾದ್ರಿ ವಿವಿಧ ಶಾಲಾ ಕಾಲೇಜುಗಳಲ್ಲ್ಲಿ ಕಾರ್ಯಾಗಾರಗಳನ್ನು ಆಯೋಜಿಸಿದೆ. ವಿದ್ಯಾರ್ಥಿಗಳು ತಾಂತ್ರಿಕ ಸವಾಲುಗಳಿಗೆ ಅಗತ್ಯ ಕೌಶಲ್ಯ ಪರಿಹಾರ, ಮಾರ್ಗದರ್ಶನ ಒದಗಿಸಲಾಗುತ್ತದೆ. ಇದಲ್ಲದೆ ಸಿನೆರ್ಜಿಯಾಆಕರ್ಷಕ ರೊಬೊಟಿಕ್ಸ್ ಸ್ಪರ್ಧೆಗಳನ್ನು ಒಳಗೊಂಡಿರುತ್ತದೆ. ಸಹ್ಯಾದ್ರಿ ರೋಬೋಟಿಕ್ಸ್ ಕ್ಲಬ್ ರೋಬೋ ಸಾಕರ್ ಮತ್ತು ಲೈನ್ ಫಾಲೋವರ್ ಚಾಲೆಂಜ್ ನಂತಹ ಈವೆಂಟ್ ಗಳನ್ನು ಆಯೋಜಿಸಲಾಗಿದ್ದು, ಯುವ ಇಂಜಿನಿಯರ್ಗಳು ತಮ್ಮ ತಾಂತ್ರಿಕ ಕೌಶಲ್ಯ ಮತ್ತು ಸೃಜನಶೀಲನೆಯನ್ನು ಪ್ರದರ್ಶಿಸಲು ಅವಕಾಶ ನೀಡಲಾಗುತ್ತದೆ. ಏರೋಬ್ಯಾಟಿಕ್, ಸ್ಕೈಡೈವಿಂಗ್ ಸಾಹಸಗಳು ಮತ್ತು ಏರ್ ಶೋಗಳು ಸಾರ್ವಜನಿಕರನ್ನೂ ಆಕರ್ಷಿಸಲಿದೆ ಎಂದು ಉಪ ಪ್ರಾಂಶುಪಾಲ ಡಾ. ಸುಧೀರ್ ಶೆಟ್ಟಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಬೇಸಿಕ್ ಸೈನ್ಸ್ ಎಚ್ಒಡಿ ಡಾ.ಪ್ರಶಾಂತ್ ರಾವ್, ಕಾರ್ಯಕ್ರಮದ ವಿದ್ಯಾರ್ಥಿ ಸಂಯೋಜಕರಾದ ತೇಜಸ್ ನಾಯಕ್, ಜೀವಿತಾ ಜೆ.ಎಸ್., ಅಮೃತ್ರಾಜ್ ಉಪಸ್ಥಿತರಿದ್ದರು.