ತಲಪಾಡಿ ಗ್ರಾ.ಪಂ: ಬಿಜೆಪಿ ಬೆಂಬಲಿತರ ಬಲದಿಂದ ಎಸ್‌ಡಿಪಿಐಗೆ ಅಧ್ಯಕ್ಷ ಸ್ಥಾನ
ಅಧ್ಯಕ್ಷರಾಗಿ ಟಿ.ಇಸ್ಮಾಯಿಲ್, ಪುಷ್ಪಾವತಿ ಶೆಟ್ಟಿ ಉಪಾಧ್ಯಕ್ಷೆಯಾಗಿ ಆಯ್ಕೆ
ಉಳ್ಳಾಲ : ತಲಪಾಡಿ ಗ್ರಾಮ ಪಂಚಾಯತ್ ಎರಡನೇ ಅವಧಿಗೆ ಎಸ್‌ಡಿಪಿಐ ಬೆಂಬಲಿತ ಟಿ.ಇಸ್ಮಾಯಿಲ್ ಅಧ್ಯಕ್ಷರಾಗಿ, ಬಿಜೆಪಿ ಬೆಂಬಲಿತ ಪುಷ್ಪಾವತಿ ಶೆಟ್ಟಿ ಅವರು ಉಪಾಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಎಸ್‌ಡಿಪಿಐ ಬೆಂಬಲಿತ ಸದಸ್ಯರನ್ನು ಬಿಜೆಪಿ ಬೆಂಬಲಿತರು ಬೆಂಬಲಿಸಿದ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಸತ್ಯರಾಜ್ ಪರಾಭವಗೊಂಡರು.
ಪಂಚಾಯಿತಿಯಲ್ಲಿ ಒಟ್ಟು 24 ಸದಸ್ಯರ ಪೈಕಿ 13 ಬಿಜೆಪಿ ಬೆಂಬಲಿತ ಸದಸ್ಯರಿದ್ದರೆ, ಓರ್ವ ಕಾಂಗ್ರೆಸ್ ಹಾಗೂ 10 ಎಸ್‌ಡಿಪಿಐ ಬೆಂಬಲಿತರು ಇದ್ದಾರೆ. ಗುರುವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ವೈಭವ್ ಶೆಟ್ಟಿ ಮತ್ತು ಎಸ್‌ಡಿಪಿಐ ಬೆಂಬಲಿತ ಹಬೀಬಾ ಡಿ.ಬಿ ಗೈರು ಹಾಜರಾಗಿದ್ದರು.
ಟಿ ಇಸ್ಮಾಯಿಲ್ ಮತ್ತು ಸತ್ಯರಾಜ್ ನಡುವೆ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಇತ್ತು. ಇಬ್ಬರೂ ಸಮನಾದ ಮತಗಳನ್ನು ಪಡೆದಿದ್ದರು. ನಂತರ ಚುನಾವಣಾಧಿಕಾರಿ ಆದೇಶದಂತೆ ಚೀಟಿ ಎತ್ತುವ ಪ್ರಕ್ರಿಯೆಯಲ್ಲಿ ಟಿ.ಇಸ್ಮಾಯಿಲ್ ಗೆಲುವು ಸಾಧಿಸಿದರು. ಬಿಜೆಪಿ ಬೆಂಬಲಿತರ ಸಂಖ್ಯೆ ಹೆಚ್ಚಿದ್ದರೂ, ಅವರಲ್ಲಿ ಇಬ್ಬರು ಎಸ್‌ಡಿಪಿಐ ಬೆಂಬಲಿತರಿಗೆ ಮತಚಲಾಯಿಸಿದ ಕಾರಣ ಸಮಬಲ ಬಂದಿತ್ತು.
ಚುನಾವಣಾಧಿಕಾರಿಯಾಗಿ ಶ್ವೇತಾ ಕಾರ್ಯನಿರ್ವಹಿಸಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೇಶವ ಇದ್ದರು.