ಉಳ್ಳಾಲ ತಾಲೂಕು ವ್ಯಾಪ್ತಿಯ 420 ಬಿಪಿಎಲ್ ಕಾರ್ಡ್ ಅನರ್ಹ ಸಮಸ್ಯೆ ಇತ್ಯರ್ಥ: ರಫೀಕ್ ಅಂಬ್ಲಮೊಗರು
ಉಳ್ಳಾಲ: ತಾಲೂಕು ವ್ಯಾಪ್ತಿಯಲ್ಲಿ ಬೇರೆ ಬೇರೆ ಕಾರಣಗಳಿಂದ ಅಮಾನತಿನಲ್ಲಿಡಲಾಗಿದ್ದ 420 ಬಿಪಿಎಲ್ ಪಡಿತರ ಕಾರ್ಡ್ ಗಳ ಸಮಸ್ಯೆ ಇತ್ಯರ್ಥಪಡಿಸಲಾಗಿದೆ. ಅಮಾನತುಗೊಂಡಿದ್ದ 420 ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಸ್ಥರು ಡಿಸೆಂಬರ್ ತಿಂಗಳಿನಿಂದ ಆಹಾರ ಸವಲತ್ತು ಪಡೆಯಲು ಅರ್ಹರಾಗಿರುತ್ತಾರೆ ಎಂದು ಉಳ್ಳಾಲ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಫೀಕ್ ಅಂಬ್ಲಮೊಗರು ತಿಳಿಸಿದ್ದಾರೆ.
ಅವರು ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನಲ್ಲಿ 29,415 ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬಗಳು ಇದ್ದು, ಈ ಪೈಕಿ 420 ಕುಟುಂಬಗಳ ಬಿಪಿಎಲ್ ಕಾರ್ಡ್ ಗಳನ್ನು ಬೇರೆ ಬೇರೆ ಕಾರಣಗಳಿಂದ ಅಮಾನತಿನಲ್ಲಿಡಲಾಗಿತ್ತು. ಈ ಬಗ್ಗೆ ಸ್ಪೀಕರ್ ಯು.ಟಿ.ಖಾದರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆಶಿ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪರಲ್ಲಿ ಸಮಸ್ಯೆ ಇತ್ಯರ್ಥಪಡಿಸುವಂತೆ ಕೋರಿದ್ದೆವು. ಅದರಂತೆ ಉಳ್ಳಾಲ ತಾಲೂಕು ವ್ಯಾಪ್ತಿಯಲ್ಲಿ ಅಮಾನತಿನಲ್ಲಿಡಲಾಗಿದ್ದ 420 ಬಿಪಿಎಲ್ ಪಡಿತರ ಚೀಟಿ ಚಾಲ್ತಿಯಲ್ಲಿಡಲು ಸರಕಾರ ಸೂಚಿಸಿದೆ. ಈ ಸಮಸ್ಯೆ ಬಗೆಹರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆಶಿ, ಸ್ಪೀಕರ್ ಯು.ಟಿ.ಖಾದರ್, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಮುನಿಯಪ್ಪರಿಗೆ ಧನ್ಯವಾದ ಸಮರ್ಪಣೆ ಮಾಡುತ್ತೇವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪಂಚ ಗ್ಯಾರೆಂಟಿ ಅನುಷ್ಠಾನ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಸುರೇಖಾ ಚಂದ್ರಹಾಸ್, ಉಳ್ಳಾಲ ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರಾದ ಜೆಸಿಂತಾ ಮೆಂಡೋನ್ಸಾ, ದೇವಣ್ಣ ಶೆಟ್ಟಿ, ವಿಲ್ಫ್ರೆಡ್ ಡಿಸೋಜ, ಸಮೀರ್ ಪಜೀರ್, ಸಲಾಂ ಕೆ.ಸಿ.ರೋಡ್ ಉಪಸ್ಥಿತರಿದ್ದರು.