ಹಣ ಪಡೆದು ಟಿಕೆಟ್ ಕೊಡುವ ಸಂಸ್ಕೃತಿ ಬಿಜೆಪಿಯಲ್ಲಿಲ್ಲ: ಸಿ.ಟಿ.ರವಿ
ಮಂಗಳೂರು, ಸೆ.16: ಹಣ ಪಡೆದು ಚುನಾವಣೆಗೆ ಟಿಕೆಟ್ ನೀಡುವ ಸಂಸ್ಕೃತಿ ಬಿಜೆಪಿಯಲ್ಲಿಲ್ಲ. ಚೈತ್ರಾ ಕುಂದಾಪುರ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಯಬೇಕಾಗಿದೆ ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ಹೇಳಿದ್ದಾರೆ.
ನಗರದ ಸಂಘ ನಿಕೇತನದಲ್ಲಿಂದು ಪಕ್ಷದ ಚುನಾವಣಾ ಸಿದ್ಧತೆಯ ಹಿನ್ನಲೆಯಲ್ಲಿ ಸಭೆಗೆ ಆಗಮಿಸಿದ್ದ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಗೋವಿಂದ ಬಾಬು ಪೂಜಾರಿಗೆ ಸ್ವಲ್ಪ ಎಚ್ಚರ ವಹಿಸಿ ವಿಚಾರಿಸುತ್ತಿದ್ದರೆ ಈ ರೀತಿ ಮೋಸ ಹೋಗಲು ಸಾಧ್ಯವಿರುತ್ತಿರಲಿಲ್ಲ. ಚೈತ್ರಾ ಕುಂದಾಪುರ ಪ್ರಕರಣದಲ್ಲಾಗಿರುವಂತೆ ಬಿಜೆಪಿಯಲ್ಲಿ ಹಣ ಪಡೆದು ಟಿಕೆಟ್ ನೀಡುವ ಪದ್ಧತಿ ಇಲ್ಲ. ಯಾವುದೇ ಹಣ ಬಲ ಇಲ್ಲದ ನೂರಾರು ಕಾರ್ಯ ಕರ್ತರು ಜನ ಪ್ರತಿನಿಧಿಗಳಾಗಿದ್ದಾರೆ. ಬೈಂದೂರಿನ ಶಾಸಕರು, ಸುಳ್ಯ ಶಾಸಕರು ಯಾವುದೇ ಹಣ ಬಲದಿಂದ ಶಾಸಕರಾದವರಲ್ಲ. ಆದರೆ ಚೈತ್ರಾ ಕುಂದಾಪುರ ಪ್ರಕರಣದ ಬಗ್ಗೆ ಜನರಿಗೆ ಸತ್ಯ ಸಂಗತಿ ತಿಳಿಯಬೇಕಾದರೆ ಸಮಗ್ರ ತನಿಖೆ ಯಾಗಬೇಕು ಎಂದು ಸಿ.ಟಿ.ರವಿ ಒತ್ತಾಯಿಸಿದ್ದಾರೆ.
ಮುಂದಿನ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ, ಲೋಕಸಭಾ ಚುನಾವಣೆಯ ಬಗ್ಗೆ ತಯಾರಿ ನಡೆಯುತ್ತಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಅಂತಿಮ ತೀರ್ಮಾನ ಆಗಿಲ್ಲ, ಮಾತುಕತೆ ಮಾತ್ರ ನಡೆದಿದೆ ಎಂದು ಸಿ.ಟಿ.ರವಿ ತಿಳಿಸಿದರು.
*ರಾಜ್ಯದಲ್ಲಿ ವಿಪಕ್ಷ ನಾಯಕನ ಆಯ್ಕೆ ಆಗದೆ ಇರುವುದು ಬಿಜೆಪಿ ತಂತ್ರಗಾರಿಕೆಯ ಒಂದು ಭಾಗವಾಗಿರುವ ಸಾಧ್ಯತೆ ಇದೆ ಎಂದು ಸಿ.ಟಿ.ರವಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಮೂಡುಬಿದಿರೆ, ಮಾಜಿ ಸಚಿವ ಕೋಟ ಶ್ರೀ ನಿವಾಸ ಪೂಜಾರಿ, ಮಾಜಿ ಶಾಸಕ ಮೋನಪ್ಪ ಭಂಡಾರಿ, ಮನಪಾ ಮೇಯರ್ ಸುಧೀರ್ ಶೆಟ್ಟಿ, ವಕ್ತಾರ ರವಿಶಂಕರ್ ಮಿಜಾರ್, ರಣ್ ದೀಪ್ ಕಾಂಚನ್ ಉಪಸ್ಥಿತರಿದ್ದರು.