ಉಳ್ಳಾಲ: ಕಲ್ಲಿದ್ದಲು ಆಧಾರಿತ ಫಿಶ್ ಮೀಲ್ ಕಂಪೆನಿಯ ವಿರುದ್ಧ ಡಿವೈಎಫ್ಐ ಪ್ರತಿಭಟನೆ
ಉಳ್ಳಾಲ: ಇಲ್ಲಿನ ನಗರ ಸಭಾ ವ್ಯಾಪ್ತಿಯ ಕೋಟೆಪುರದಲ್ಲಿ ಕಾರ್ಯಾಚರಿಸುತ್ತಿರುವ ಕಲ್ಲಿದ್ದಲು ಆಧಾರಿತ ಮೀನು ಸಂಸ್ಕರಣಾ ಕಂಪೆನಿಯು ಸಮುದ್ರದಲ್ಲಿ ಮೀನುಗಳ ನಾಶಕ್ಕೆ ಕಾರಣವಾಗುತ್ತಿದ್ದು, ಪರಿಸರಕ್ಕೆ ಮಾರಕವಾದ ಈ ಕಂಪೆನಿಯ ವಿರುದ್ಧ ಕ್ರಮ ಜರುಗಿಸಲು ವಿಫಲವಾದ ದ.ಕ. ಜಿಲ್ಲಾಡಳಿತದ ಧೋರಣೆಯ ವಿರುದ್ಧ ಡಿವೈಎಫ್‌ಐ ಕೋಡಿ, ಕೋಟೆಪುರ ಘಟಕದ ವತಿಯಿಂದ ಸೋಮವಾರ ಕೋಟೆಪುರದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಡಿವೈಎಫ್ಐ ಜಿಲ್ಲಾ ಅಧ್ಯಕ್ಷ ಬಿ.ಕೆ ಇಮ್ತಿಯಾಝ್, "ಕೋಟೆ ಪುರದಲ್ಲಿ ಕಾರ್ಯಾಚರಿಸುತ್ತಿರುವ ಮೀನು ಸಂರಕ್ಷಣಾ ಘಟಕದಲ್ಲಿ ಬಳಕೆ ಮಾಡುವ ಕಲ್ಲಿದ್ದಲಿನ ಹಾರುಬೂದಿಯಿಂದ ಸ್ಥಳೀಯ ಜನರ ಜೀವನದ ಮೇಲೆ ಗಂಭೀರ ಪರಿಣಾಮ ಬೀರಿದೆ. ಇದರಿಂದ ಇಲ್ಲಿನ ಜನರು ಅಸ್ತಮಾ, ಮಲೇರಿಯಾ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ, ಸ್ಥಳೀಯ ನಗರಸಭೆ ಕ್ರಮ ಕೈಗೊಳ್ಳಲು ವಿಫಲವಾಗಿದೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಕೂಡ ಯಾವುದೇ ಕ್ರಮ ಕೈಗೊಳ್ಳದೇ ಕಂಪೆನಿ ಪರ ಹೇಳಿಕೆ ನೀಡುವ ಮೊದಲು ಈ ಪರಿಸರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದರು.
ಕೋಟೆಪುರದ ಜನರು ಓಟು ಹಾಕಿ ಗೆಲ್ಲಿಸಿ ಕಳಿಸಿದ ಜನಪ್ರತಿನಿಧಿಗಳು ಇತ್ತ ಸುಳಿಯುವುದಿಲ್ಲ.ಇಲ್ಲಿನ ನಿಯೋಗವನ್ನು ಕರೆಸಿ ಸ್ಥಳೀಯ ನಗರಸಭೆಯ ಗಮನ ಸೆಳೆದು ಸ್ಪಂದಿಸುವ ಅಥವಾ ಜಿಲ್ಲಾಡಳಿತದ ಗಮನ ಸೆಳೆದು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುವ ಕೆಲಸವನ್ನೂ ಮಾಡುತ್ತಿಲ್ಲ. ಈ ಕಲ್ಲಿದ್ದಲು ಆಧಾರಿತ ಮೀನು ಸಂರಕ್ಷಣಾ ಘಟಕ ಇಲ್ಲಿನ ಜನಪ್ರತಿನಿಧಿಗಳು ಹಾಗೂ ಭ್ರಷ್ಟ ಅಧಿಕಾರಿಗಳ ಸಹಕಾರದೊಂದಿಗೆ ಇಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಆರೋಪಿಸಿದರು.
ಮೀನು ಸಂರಕ್ಷಣಾ ಘಟಕದಲ್ಲಿ ಬಳಕೆ ಮಾಡುವ ಕಲ್ಲಿದ್ದಲಿನ ಹಾರುಬೂದಿ ಕಿಲೋ ಮೀಟರ್ ದೂರಕ್ಕೆ ಸಂಚರಿಸಿ ಮನೆಗಳಿಗೆ, ಸಮುದ್ರದ ಮಡಿಲಿಗೆ ಸೇರುತ್ತದೆ. ಇದರಿಂದ ಯುವಕರ, ವಯಸ್ಕರ ಆರೋಗ್ಯದ ಮೇಲೆ ಹಾಗೂ ಮೀನುಗಾರಿಕೆ ಮೇಲೂ ಪರಿಣಾಮ ಬೀರುತ್ತದೆ. ನಮಗೆ ಕಲ್ಲಿದ್ದಲು ಆಧಾರಿತ ಮೀನು ಸಂರಕ್ಷಣಾ ಘಟಕ ಮುಖ್ಯವಲ್ಲ. ಆರೋಗ್ಯವಂತ ಜೀವನ ಮುಖ್ಯ. ಇದನ್ನು ಆರೋಗ್ಯ ಇಲಾಖೆ, ಜಿಲ್ಲಾಡಳಿತ ಒದಗಿಸಿ ಕೊಡಲಿ ಎಂದು ಒತ್ತಾಯಿಸಿದರು.
ಇದೇ ಘಟಕದಿಂದ ಕೊಳಚೆ ನೀರು ಸಮುದ್ರಕ್ಕೆ ಹರಿಯುತ್ತಿರುವ ಬಗ್ಗೆ ವೀಡಿಯೊ ತುಣುಕುಗಳು ವೈರಲ್ ಆಗಿವೆ. ಮೀನುಗಾರಿಕೆ ಸಂದರ್ಭದಲ್ಲಿ ಅನುಭವಿಸಿದ ತೊಂದರೆಯಿಂದಾಗಿ ಮೀನುಗಾರನೊಬ್ಬ ಈ ವೀಡಿಯೊ ಮಾಡಿ ವೈರಲ್ ಮಾಡಿದ್ದಾರೆ. ಈ ಘಟಕದ ಮುಂಭಾಗದಿಂದ ಹೂಳೆತ್ತಿದರೆ ನೂರಾರು ಪೈಪುಗಳು ಸಿಗಬಹುದು. ಈ ಪೈಪುಗಳನ್ನು ಹಾಕಲು ಅನುಮತಿ ನೀಡಿದವರಾರು ಎಂದು ಪ್ರಶ್ನಿಸಿದರು.
ಈ ರೀತಿ ಪೈಪ್ ಹಾಕಲು ಅವಕಾಶ ಇಲ್ಲ. ಅದಕ್ಕೆ ಕೆಲವು ನಿಬಂಧನೆಗಳು ಕೂಡಾ ಇವೆ. ಉಳ್ಳಾಲದಲ್ಲಿ ಕಾರ್ಖಾನೆ ನಿರ್ಮಿಸಲು ಇದು ಕೈಗಾರಿಕಾ ಪ್ರದೇಶ ಕೂಡಾ ಅಲ್ಲ. ಆದರೆ ಎಂಜಲು ಕಾಸಿಗಾಗಿ ಅಧಿಕಾರಿಗಳು ನೊಟೀಸ್ ನೀಡದೇ ಮೌನ ವಹಿಸುತ್ತಿದ್ದಾರೆ. ಸಿಆರ್ ಝಡ್ ಜಾಗವನ್ನು ಆಕ್ರಮಿಸಿಕೊಂಡು ಇಲ್ಲಿ ಕಾರ್ಖಾನೆ ನಿರ್ಮಿಸಲಾಗಿದೆ. ಕಾರ್ಖಾನೆ ಮಾಲೀಕರು ಇಲ್ಲಿನ ಜನರನ್ನು ನಿರ್ಲಕ್ಷ್ಯ ಮಾಡಿಕೊಂಡು ದುಡ್ಡು ಸಂಪಾದನೆ ಮಾಡುತ್ತಿದ್ದಾರೆ. ಕೊಳಚೆ ವಸ್ತುಗಳನ್ನು ಸಮುದ್ರಕ್ಕೆ ಬಿಡುವ ಕಾರ್ಖಾನೆ ವಿರುದ್ಧ ಕ್ರಮ ಆಗಬೇಕು. ಒಂದು ವೇಳೆ ಪರಿಸರ ಹಾನಿಯಿಂದ, ಕೊಳಚೆ ತ್ಯಾಜ್ಯದಿಂದಾಗಿ ಮೀನುಗಾರರಿಗೆ ತೊಂದರೆಯಾದರೆ ಡಿವೈಎಫ್ಐ ಸುಮ್ಮನೆ ಕೂರುವುದಿಲ್ಲ. ಮೀನು ಸಂರಕ್ಷಣಾ ಘಟಕದ ಮಾಲಕರ ಪ್ರಭಾವಕ್ಕೆ, ಆಮಿಷಗಳಿಗೆ ನಾವು ಹೆದರುವುದಿಲ್ಲ ಎಂದರು.
ಕೋಟೆಪುರದಲ್ಲಿ ಕಾರ್ಯಾಚರಿಸುತ್ತಿರುವ ಕಲ್ಲಿದ್ದಲು ಆಧಾರಿತ ಮೀನು ಸಂಸ್ಕರಣಾ ಕಂಪೆನಿಯಿಂದ ಆಗುತ್ತಿರುವ ಪರಿಣಾಮಗಳಿಗೆ ಪರಿಹಾರ ವ್ಯವಸ್ಥೆ ಆಗದಿದ್ದಲ್ಲಿ ಸ್ಥಳೀಯ ನಗರ ಸಭೆಗೆ ಮುತ್ತಿಗೆ ಹಾಕುವ ಕೆಲಸ ಮಾಡುತ್ತೇವೆ. ಒಂದು ವೇಳೆ ಅಲ್ಲಿ ನ್ಯಾಯ ಸಿಗದೇ ಹೋದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಗೆ, ಬೈಕಂಪಾಡಿ ಕೇಂದ್ರ ಕಚೇರಿಗೂ ಕಾಲ್ನಡಿಗೆಯಲ್ಲಿ ತೆರಳಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ಮೀನು ಸಂರಕ್ಷಣಾ ಘಟಕದ ಮಾಲಕರು ದಾನಿಗಳು ಎಂದು ಹೇಳುತ್ತಾರೆ. ಆದರೆ ಮಕ್ಕಳಿಗೆ ವಿಷವುಣಿಸಿ ಮಾಡುವ ದಾನ ನಮಗೆ ಬೇಕಾಗಿಲ್ಲ. ಈ ದಾನದಿಂದ ನಿಮಗೂ ಯಾವುದೇ ಪ್ರಯೋಜನ ಸಿಗುವುದಿಲ್ಲ. ದಾನ ಮಾಡುವ ಮೊದಲು ಜನರಿಗೆ ತೊಂದರೆ ಆಗುವಂತಹ ಕೆಲಸಗಳನ್ನು ಕೈಬಿಡಬೇಕು. ಇಲ್ಲದಿದ್ದಲ್ಲಿ ಮುಂದೆ ಇದೇ ಜಾಗದಲ್ಲಿ ಕಲ್ಲಿದ್ದಲು ಸಾಗಿಸುವ ಲಾರಿಗಳನ್ನು ತಡೆದು ಡಿವೈಎಫ್ಐ ಹೋರಾಟ ಮಾಡಲಿದೆ. ಕಲ್ಲಿದ್ದಲು ಬಳಕೆ ಮಾಡುವುದನ್ನು ನಿಲ್ಲಿಸುವವರೆಗೆ ಹೋರಾಟ ಮಾಡುತ್ತೇವೆ. ಈ ವಿಚಾರದಲ್ಲಿ ಚರ್ಚೆ ಮಾಡಲು ತಾಕತ್ತಿದ್ದರೆ ಮುಂದೆ ಬನ್ನಿ. ನಾವು ಬಹಿರಂಗವಾಗಿ ಚರ್ಚೆ ಮಾಡಲು ನಾವು ತಯಾರಿದ್ದೇವೆ ಎಂದು ಸವಾಲೆಸೆದರು.
ಜಿಲ್ಲಾ ಕೋಶಾಧಿಕಾರಿ ಮನೋಜ್ ವಾಮಂಜೂರು ಮಾತನಾಡಿ, ಇಲ್ಲಿ ಜನರಿಗೆ ಬದುಕಲು ಅವಕಾಶ ನೀಡಬೇಕು. ಕಾರ್ಖಾನೆ ಬೆಳೆಸಲಿಕ್ಕಾಗಿ ಜನರನ್ನು ಕಡೆಗಣನೆ ಮಾಡುವುದು ಸರಿಯಲ್ಲ. ಸಂವಿಧಾನವೇ ಬದುಕುವ ಸ್ವಾಂತಂತ್ರ್ಯ ನೀಡಿದೆ. ಇದನ್ನು ಕಸಿಯುವ ಕೆಲಸವನ್ನು ಕಾರ್ಖಾನೆ ಮಾಡುವುದು ಬೇಡ. ಒಂದೆಡೆ ಸಮುದ್ರ, ಇನ್ನೊಂದೆಡೆ ನದಿಯನ್ನು ಹೊಂದಿರುವ ಜಾಗ ಇದಾಗಿದೆ. ಈ ಜಾಗದಲ್ಲಿ ಎಲ್ಲಾ ಕಾರ್ಯಚಟುವಟಿಕೆ ನಡೆಸಲು ಸುಲಭ ಆಗುತ್ತದೆ ಎಂಬ ಕಾರಣದಿಂದ ಕಾರ್ಖಾನೆ ಮಾಲೀಕರು ಇದೇ ಜಾಗ ಆಯ್ಕೆ ಮಾಡುತ್ತಾರೆ. ಈ ಜಾಗದಲ್ಲಿ ಕಾರ್ಖಾನೆ ಮಾಡಿದರೆ ಅವರಿಗೆ ತ್ಯಾಜ್ಯ ವಿಲೇವಾರಿಗೆ ಖರ್ಚು ವೆಚ್ಚ ಪ್ರತ್ಯೇಕ ಆಗಬೇಕಾಗಿಲ್ಲ. ಇದರಿಂದ ಜನರ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಮಾಲೀಕರಿಗೆ ಗೊತ್ತಿದ್ದರೂ ಕೂಡ ಅವರು ಪರಿಸರ ಉಳಿಸುವ ಗೋಜಿಗೆ ಹೋಗುವುದಿಲ್ಲ. ಈ ಬಗ್ಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಮೂಲಕ ಪರಿಸರ ಉಳಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.
ಒಂದು ವೇಳೆ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ನಿರಂತರ ಹೋರಾಟ ಇದೆ. ಎಂಆರ್ ಪಿಎಲ್, ಟೋಲ್ ವಿರುದ್ಧ ಹೋರಾಟ ಮಾಡಿ ಯಶಸ್ಸು ಗಳಿಸಿದ ಡಿವೈಎಫ್ಐ ಗೆ ಈ ಮೀನು ಸಂರಕ್ಷಣಾ ಘಟಕದ ವಿರುದ್ಧ ಯಶಸ್ಸು ಗಳಿಸಲು ಕಷ್ಟವೇನಿಲ್ಲ. ಒಟ್ಟಿನಲ್ಲಿ ಜನರಿಗೆ ನ್ಯಾಯ ಸಿಗುವವರೆಗೆ ನಮ್ಮ ಹೋರಾಟ ಇದೆ ಎಂದು ಹೇಳಿದರು.
ಈ ಪ್ರತಿಭಟನೆ ಪ್ರಯುಕ್ತ ಕೋಡಿಯಿಂದ ಕೋಟೆಪುರದಲ್ಲಿರುವ ಫಿಶ್‌ಮೀಲ್ ಕಂಪೆನಿಯವರೆಗೆ ಮೆರವಣಿಗೆ ಮೂಲಕ ತೆರಳಿದ ಪ್ರತಿಭಟನಾ ನಿರತ ಡಿವೈಎಫ್ಐ ಮುಖಂಡರು ಈ ಕಂಪೆನಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಘೋಷಣೆ ಕೂಗಿದರು.
ಪ್ರತಿಭಟನಾ ಸಭೆ ಯಲ್ಲಿ ಹರೇಕಳ ಗ್ರಾ.ಪಂ.ಸದಸ್ಯ ಅಶ್ರಫ್ ನಾಳ, ಉಳ್ಳಾಲ ತಾಲೂಕು ಡಿವೈಎಫ್ಐ ಕಾರ್ಯದರ್ಶಿ ಅಮೀರ್ ಉಳ್ಳಾಲ ಬೈಲ್, ಉಪಾಧ್ಯಕ್ಷ ರಝಾಕ್ ಮುಡಿಪು, ಸಿಐಟಿಯು ಮುಖಂಡ ಇಬ್ರಾಹಿಂ ಮದಕ, ರೈತ ಮುಖಂಡ ಜನಾರ್ದನ ಅಮೀನ್, ಬಶೀರ್ ಹರೇಕಳ, ಸಿಪಿಐಎಂ ಉಳ್ಳಾಲ ತಾಲೂಕು ಕಾರ್ಯದರ್ಶಿ ಜಯಂತ್ ನಾಯ್ಕ್, ಡಿವೈಎಫ್ಐ ಕೋಟೆಪುರ ಘಟಕದ ಅಧ್ಯಕ್ಷ ಇಮ್ರಾನ್ ಕೋಟೆಪುರ, ಕಾರ್ಯದರ್ಶಿ ನೌಫಲ್ ಕೋಟೆಪುರ ಮತ್ತಿತರರು ಉಪಸ್ಥಿತರಿದ್ದರು.
ಡಿವೈಎಫ್ಐ ಉಳ್ಳಾಲ ತಾಲೂಕು ಅಧ್ಯಕ್ಷ ರಝಾಕ್ ಮೊಂಟೆಪದವು ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ರಿಝ್ವಾನ್ ಹರೇಕಳ ಸ್ವಾಗತಿಸಿದರು. ಕಾರ್ಯದರ್ಶಿ ಸುನಿಲ್ ತೇವುಲ ವಂದಿಸಿದರು.