ಉಳ್ಳಾಲ: ಆಧಾರ್ ಕಾರ್ಡ್ ಇಲ್ಲದ ಹಿನ್ನೆಲೆ; ಅಪ್ರಾಪ್ತ ವಿದ್ಯಾರ್ಥಿನಿಯರನ್ನು ಅರ್ಧ ದಾರಿಯಲ್ಲೇ ಕೆಳಗಿಳಿಸಿದ ನಿರ್ವಾಹಕ
ಸಾರ್ವಜನಿಕರ ಆಕ್ರೋಶ
ಉಳ್ಳಾಲ: ಆಧಾರ್ ಕಾರ್ಡ್ ಇಲ್ಲದೆ ಸರಕಾರಿ ಬಸ್ಸಲ್ಲಿ ಪ್ರಯಾಣಿಸಿದ ಐವರು ಪ್ರೈಮರಿ ಶಾಲಾ ವಿದ್ಯಾರ್ಥಿನಿಯರನ್ನು ಅರ್ಧ ದಾರಿಯಲ್ಲೇ ಇಳಿಸಿದ ಬಸ್ಸನ್ನು ತಡೆದ ಸ್ಥಳೀಯರು ನಿರ್ವಾಹಕನನ್ನು ತರಾಟೆಗೆ ತೆಗೆದುಕೊಂಡ ಘಟನೆ ಕುಂಪಲದಲ್ಲಿ ನಡೆದಿದೆ.
ಬಸ್ ನಿರ್ವಾಹಕನನ್ನು ಹುಸೇನ್ ಸಾಬ್.ಐ ಹಳ್ಳೂರ ಎಂದು ಗುರುತಿಸಲಾಗಿದೆ. ಮಂಗಳೂರು-ಕುಂಪಲ ಮಧ್ಯೆ ಓಡಾಡುವ ಕೆಎಸ್ಸಾರ್ಟಿಸಿ ಬಸ್ ನಲ್ಲಿ ಬದಲಿ ನಿರ್ವಾಹಕನಾಗಿ ಬಂದ ಈತ ಎರಡನೇ ಮತ್ತು ಮೂರನೇ ತರಗತಿ ಓದುವ ಐದು ಮಂದಿ ವಿದ್ಯಾರ್ಥಿನಿಯರಲ್ಲಿ ಆಧಾರ್ ಕಾರ್ಡ್ ಇಲ್ಲದ ಕಾರಣ ನಿಮಗೆ ಉಚಿತ ಪ್ರಯಾಣವಿಲ್ಲವೆಂದು ಹಣ ಕೇಳಿದ್ದ. ವಿದ್ಯಾರ್ಥಿಗಳು ಹಣವನ್ನೂ ನೀಡದ್ದರಿಂದ ಬಸ್ಸಿನಿಂದ ಅರ್ಧ ದಾರಿಯಲ್ಲೇ ಕೆಳಗೆ ಇಳಿಸಿ ಅಮಾನವೀಯತೆ ಮರೆದಿದ್ದಾನೆ ಎನ್ನಲಾಗಿದೆ.
ಇಂದು ಶಾಲೆ ಮಗಿಸಿ ಕುಂಪಲ ಸರಕಾರಿ ಶಾಲೆಯ ಐವರು ವಿದ್ಯಾರ್ಥಿನಿಯರು ಸರಕಾರಿ ಬಸ್ಸು ಹತ್ತಿದ್ದರು. ಬಸ್ಸಿನ ಖಾಯಂ ನಿರ್ವಾಹಕ ವಿದ್ಯಾರ್ಥಿನಿಯರಲ್ಲಿ ಆಧಾರ್ ಕಾರ್ಡ್ ಕೇಳುತ್ತಿರಲಿಲ್ಲ. ಹಾಗಾಗಿ ವಿದ್ಯಾರ್ಥಿನಿಯರು ಆಧಾರ್ ತಂದಿರಲಿಲ್ಲ. ಇಂದು ಖಾಯಂ ನಿರ್ವಾಹಕ ರಜೆ ಮಾಡಿದ್ದರಿಂದ ಬದಲಿ ಕರ್ತವ್ಯದಲ್ಲಿದ್ದ ಹುಸೇನ್ ಸಾಬ್ ಎಳೆಯ ವಿದ್ಯಾರ್ಥಿಗಳೆಂದು ಕರುಣೆ ತೋರದೆ ಜೇಬಲ್ಲಿ ಹಣವಿಲ್ಲದ ಕಾರಣ ಕುಂಪಲದ ಬಗಂಬಿಲಕ್ಕೆ ತೆರಳಲಿದ್ದ ಐವರು ಮಕ್ಕಳನ್ನು ಮೂರುಕಟ್ಟೆ ಎಂಬಲ್ಲೇ ಕೆಳಗಿಳಿಸಿ ತೆರಳಿದ್ದಾನೆ. ಈ ವಿದ್ಯಮಾನವನ್ನು ಬಸ್ಸಲ್ಲೇ ಇದ್ದ ಕುಂಪಲ ಸರಕಾರಿ ಶಾಲಾ ಮುಖ್ಯೋಪಾಧ್ಯಾಯಿನಿ ಗುಲಾಬಿ ಅವರು ಗಮನಿಸಿದ್ದಾರೆ.
ಸ್ಥಳೀಯರಾದ ಯಶವಂತ್ ಅವರು ಕೆಎಸ್ ಆರ್ ಟಿಸಿ ಅಧಿಕಾರಿ ರಮ್ಯ ಅವರನ್ನು ಸಂಪರ್ಕಿಸಿ ಎಳೆಯ ಮಕ್ಕಳನ್ನು ಮಾನವೀಯತೆ ತೋರಿಸದೆ ಬಸ್ಸಿನಿಂದ ಕೆಳಗಿಳಿಸಿದ ತಪ್ಪಿತಸ್ಥ ನಿರ್ವಾಹಕನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.