ಅವಿಭಜಿತ ದ.ಕ. ಜಿಲ್ಲಾದ್ಯಂತ ಅಕಾಲಿಕ ಮಳೆ, ಮೋಡ ಕವಿದ ವಾತಾವರಣ
ಮಂಗಳೂರು/ಉಡುಪಿ, ಜ.3: ದ.ಕ. ಮತ್ತು ಉಡುಪಿ ಜಿಲ್ಲೆಗಳ ಬಹುತೇಕ ಕಡೆಗಳಲ್ಲಿ ಇಂದು ನಸುಕಿನ ವೇಳೆ ಮಳೆ ಸುರಿದಿರುವುದು ವರದಿಯಾಗಿದೆ.
ದ.ಕ. ಜಿಲ್ಲೆಯಲ್ಲಿ ಮಂಗಳವಾರ ಮುಸ್ಸಂಜೆಯಿಂದಲೇ ಮೋಡ ಕವಿದ ವಾತಾವರಣ ಕಂಡುಬಂದಿತ್ತು. ಕೆಲವೆಡೆ ರಾತ್ರಿಯಿಂದಲೇ ತುಂತುರು ಮಳೆ ಸುರಿದಿದೆ. ಮಂಗಳೂರು ನಗರದಲ್ಲಿ ಬೆಳಗ್ಗೆ ಗುಡುಗು ಸಹಿತ ತುಂತುರು ಮಳೆಯಾಗಿದೆ.
ನಗರ ಹೊರವಲಯದ ಉಳ್ಳಾಲ, ಕೊಣಾಜೆ, ಮುಡಿಪು, ಮಂಜನಾಡಿ ಸೇರಿದಂತೆ ಹಲವೆಡೆ ಇಂದು ಬೆಳಗ್ಗೆ ಉತ್ತಮ ಮಳೆಯಾಗಿರುವುದು ವರದಿಯಾಗಿದೆ.
ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಸುಳ್ಯ ತಾಲೂಕಿನಾದ್ಯಂತ ಮಳೆ ಸುರಿದಿದೆ. ಬಂಟ್ವಾಳ ತಾಲೂಕಿನ ಹಲವೆಡೆ ಉತ್ತಮ ಮಳೆಯಾಗಿದ್ದರೆ, ಬೆಳ್ತಂಗಡಿಯಲ್ಲಿ ಬೆಳಗ್ಗೆ 9 ಗಂಟೆಯ ಸುಮಾರಿಗೆ ಮಳೆ ಸುರಿಯುತ್ತಿರುವುದು ವರದಿಯಾಗಿದೆ. ಜಿಲ್ಲಾದ್ಯಂತ ಮೋಡ ಕವಿದ ವಾತಾವರಣ ಮುಂದುವರಿದಿದೆ.
ಉಡುಪಿ ಜಿಲ್ಲೆಯಲ್ಲಿ ಬೆಳಗಿನ ಜಾವ ಮಂಜು ಮಸುಕಿದ ವಾತಾವರಣವಿದ್ದು, ಬಳಿಕ ಹಲವೆಡೆ ತುಂತುರು ಮಳೆ ಸುರಿದಿದೆ. ಬೆಳಗ್ಗೆ 9 ಗಂಟೆ ಕಳೆದರೂ ಮೋಡದ ವಾತಾವರಣ ಮುಂದುವರಿದಿದೆ.