ಯುಪಿಐನಡಿ ಬಸ್ ಟಿಕೆಟ್ ಖರೀದಿ ವ್ಯವಸ್ಥೆ ಶೀಘ್ರದಲ್ಲೇ ಆರಂಭ: ದ.ಕ ಬಸ್ ಮಾಲಕರ ಸಂಘ
PC: PTI
ಮಂಗಳೂರು, ಜೂ.15: ಯುಪಿಐ (ಗೂಗಲ್ಪೇ, ಪೋನ್ ಪೇ ಇತ್ಯಾದಿ) ವ್ಯವಸ್ಥೆಯಡಿ ಬಸ್ ಟಿಕೆಟ್ ಖರೀದಿಸುವ ವ್ಯವಸ್ಥೆಯನ್ನು ಶೀಘ್ರದಲ್ಲೇ ಆರಂಭಿಸಲು ನಿರ್ಧರಿಸಲಾಗಿದೆ ಎಂದು ದ.ಕ ಬಸ್ ಮಾಲಕರ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪಾಡಿ ತಿಳಿಸಿದ್ದಾರೆ.
ಪ್ರೆಸ್ಕ್ಲಬ್ನಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮೂರು ವರ್ಷಗಳ ಹಿಂದೆ ನಗದು ರಹಿತ ಚಲೋ ಕಾರ್ಡ್ನ್ನು ‘ಡಿಕೆಬಿಒಎ ಸ್ಟೂಡೆಂಟ್ ಕಾರ್ಡ್’ ಆಗಿ ಪರಿವರ್ತಿಸಲಾಗುತ್ತಿದೆ. ಇದರಲ್ಲಿಯೂ ವಿದ್ಯಾರ್ಥಿಗಳಿಗೆ ಶೇ.60 ರಿಯಾಯಿತಿ ದರದ ಪಾಸ್ಗಳು ದೊರೆಯಲಿವೆ ಎಂದರು.
ಡಿಜಿಟಲೀಕರಣದ ಮುಂದುವರಿದ ಭಾಗವಾಗಿ ಮುಂದಿನ ದಿನಗಳಲ್ಲಿ ಯುಪಿಐ ಬಸ್ ಟಿಕೆಟ್ ವ್ಯವಸ್ಥೆ ಹಾಗೂ ಬಸ್ ಟೈಮಿಂಗ್ಸ್ ವ್ಯವಸ್ಥೆ ಸುಧಾರಣೆಗೆ ಜಿಪಿಎಸ್ ಮೂಲಕ ನಿಯಂತ್ರಣ ವ್ಯವಸ್ಥೆ ಮಾಡಲಾಗುತ್ತಿದೆ. ಈ ಬಗ್ಗೆ ಮಂಗಳೂರು ಸ್ಮಾರ್ಟ್ ಸಿಟಿ ಲಿ.ನವರು ಯೋಜನೆ ರೂಪಿಸಿದ್ದಾರೆ ಎಂದರು.
‘ಡಿಕೆಬಿಒಎ ಸ್ಟೂಡೆಂಟ್ ಕಾರ್ಡ್’ ನಡಿ ಸಾರ್ವಜನಿಕ ಪ್ರಯಾಣಿಕರಿಗೆ ಶೇ.10ರ ರಿಯಾಯಿತಿ ದೊರೆಯಲಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ಶೇ.60 ರಿಯಾಯಿತಿಯೊಂದಿಗೆ 40 ಮತ್ತು 50 ಟ್ರಿಪ್ಗಳ ಪಾಸ್ ಪಡೆದು ಪ್ರಯಾಣಿಸಬಹುದು. ಇದು ವಿದ್ಯಾರ್ಥಿಯ ವಾಸಸ್ಥಳದಿಂದ ಶಾಲಾ ಕಾಲೇಜಿನವರಿಗೆ ಊರ್ಜಿತವಾಗಿರುತ್ತದೆ. ವಿದ್ಯಾರ್ಥಿಗಳು ಕಾರ್ಡ್ಗಳನ್ನು ಉಚಿತವಾಗಿ ಮಾಡಿಸಬಹುದು. ಪಾಸ್ಗಳನ್ನು ಹಂಪನಕಟ್ಟೆಯ ಮಿಲಾಗ್ರಿಸ್ ಕಟ್ಟಡ, ಸಿಟಿಲೈಟ್ ಕಟ್ಟಡ, ಮಾಂಡೋವಿ ಮೋಟಾರ್ಸ್ ಎದುರಿನ ಸಾಗರ್ ಟೂರಿಸ್ಟ್, ಸುರತ್ಕಲ್ ಬಸ್ ನಿಲ್ದಾಣದ ಸಮೀಪದ ಸಾಯಿ ಮೊಬೈಲ್, ತೊಕ್ಕೊಟ್ಟು ಬಸ್ ನಿಲ್ದಾಣ ಸಮೀಪದ ಅನು ಮೊಬೈಲ್ನಿಂದ ಪಡೆದುಕೊಳ್ಳಬಹುದು ಎಂದು ಅವರು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಪಿಲಾರ್, ಉಪಾಧ್ಯಕ್ಷ ಕೆ.ರಾಮಚಂದ ನಾಯಕ್, ಮಾಜಿ ಅಧ್ಯಕ್ಷ ದಿಲ್ರಾಜ್ ಆಳ್ವ ಉಪಸ್ಥಿತರಿದ್ದರು.