ಪ್ರತಿಷ್ಠಿತ ಯುಪಿಎಸ್ಸಿ ಪರೀಕ್ಷೆ| ಟ್ರಕ್ ಚಾಲಕನ ಪುತ್ರ ಮುಹಮ್ಮದ್ ಶೌಕತ್ ಅಝೀಮ್ಗೆ 345ನೇ ರ್ಯಾಂಕ್
►ಪುನೀತ್ ಚಿತ್ರದಿಂದ ಸ್ಪೂರ್ತಿ ►ಕಾರ್ಕಳದ ಬ್ಯಾರಿ ಯುವಕನ ಅಮೋಘ ಸಾಧನೆ

ಮುಹಮ್ಮದ್ ಶೌಕತ್ ಅಝೀಮ್
ಮಂಗಳೂರು, ಎ.24: ‘‘ನಾನಾಗ ಸಣ್ಣ ಹುಡುಗ. ಟಿವಿಯಲ್ಲಿ ಪುನೀತ್ ರಾಜ್ಕುಮಾರ್ರ ಚಲನಚಿತ್ರವೊಂದು ಪ್ರಸಾರವಾಗುತ್ತಿತ್ತು. ಅದರಲ್ಲಿ ಪುನೀತ್ ಐಎಎಸ್ ಅಧಿಕಾರಿಯ ಪಾತ್ರದಲ್ಲಿ ನಟಿಸುತ್ತಿದ್ದರು. ನಾನು ಆ ಚಿತ್ರ ನೋಡುತ್ತಿದ್ದಾಗ ನನ್ನ ಉಮ್ಮ (ಅಮ್ಮ) ‘ನೀನು ಕೂಡ ದೊಡ್ಡವನಾದ ಬಳಿಕ ಐಎಎಸ್ ಅಧಿಕಾರಿಯಾಗುತ್ತೀಯಾ?’ ಎಂದು ಕೇಳಿದ್ದರು. ಐಎಎಸ್ ಅಧಿಕಾರಿ ಅಂದರೆ ಏನೆಂದೇ ಆವಾಗ ನನಗೆ ಗೊತ್ತಿರಲಿಲ್ಲ. ಆದರೆ ಉಮ್ಮನ ಕನಸು ನನಸು ಮಾಡಬೇಕು ಎಂಬ ಆಸೆ ಇತ್ತು. ಅದಕ್ಕಾಗಿ ಕಷ್ಟಪಟ್ಟು ರಾತ್ರಿ ಹಗಲೆನ್ನದೆ ಓದಿ ಇದೀಗ ಕೊನೆಯ ಹಂತದಲ್ಲಿ 345ನೇ ರ್ಯಾಂಕ್ ಪಡೆದು ಐಎಎಸ್ ಅಧಿಕಾರಿಯಾಗುವ ಅರ್ಹತೆ ಪಡೆದಿದ್ದೇನೆ. ನಾನು ಶ್ರಮಪಟ್ಟು ಈ ಅರ್ಹತೆ ಪಡೆದಿರಬಹುದು. ಆದರೆ ಅದಕ್ಕಾಗಿ ತ್ಯಾಗ ಮಾಡಿದ ನನ್ನ ತಂದೆ-ತಾಯಿ ಮತ್ತು ನನಗೆ ಆರ್ಥಿಕವಾಗಿ ನೆರವು ನೀಡಿದ ಎಲ್ಲರನ್ನೂ ನೆನಪಿಸುವುದು ನನ್ನ ಕರ್ತವ್ಯವಾಗಿದೆ’’.
ಹೀಗೆ ಹೇಳಿದ್ದು, ಉಡುಪಿ ಜಿಲ್ಲೆಯ ಕಾರ್ಕಳದ ಕಸಬಾ ಗ್ರಾಮದ ಜರಿಗುಡ್ಡ ನಿವಾಸಿ ಶೇಖ್ ಅಬ್ದುಲ್ಲಾ ಮತ್ತು ಮೈಮುನಾ ದಂಪತಿಯ ಏಕೈಕ ಪುತ್ರ ಮುಹಮ್ಮದ್ ಶೌಕತ್ ಅಝೀಮ್.
ಬ್ಯಾರಿ, ಉರ್ದು, ಕನ್ನಡ, ಮಲಯಾಳಂ, ಹಿಂದಿ, ಇಂಗ್ಲಿಷ್ ಭಾಷೆಯ ಮೇಲೆ ಹಿಡಿತವುಳ್ಳ ಮುಹಮ್ಮದ್ ಶೌಕತ್ ಅಝೀಮ್ ಐಎಎಸ್ ಅಧಿಕಾರಿಯಾಗಿ ಸಾರ್ವಜನಿಕ ಸೇವೆ ಮಾಡುವ ಮೂಲಕ ತಂದೆ-ತಾಯಿಯ ಕನಸುಗಳನ್ನು ನನಸು ಮಾಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
2024ರಲ್ಲಿ ಕೇಂದ್ರ ಲೋಕಸೇವಾ ಆಯೋಗವು ನಡೆಸಿದ ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶದ ಪಟ್ಟಿಯು ಸೋಮವಾರ ಪ್ರಕಟಗೊಂಡಿದೆ. ಅದರಲ್ಲಿ ಮುಹಮ್ಮದ್ ಶೌಕತ್ ಅಝೀಮ್ 345ನೆ ರ್ಯಾಂಕ್ ಗಳಿಸಿದ್ದಾರೆ.
ಆ ಹಿನ್ನೆಲೆಯಲ್ಲಿ ʼವಾರ್ತಾಭಾರತಿʼ ಜೊತೆ ಮಾತನಾಡಿದ ಅವರು ನನ್ನ ತಂದೆ ಟ್ರಕ್ ಚಾಲಕರಾಗಿದ್ದರು. ತಾಯಿ ಬೀಡಿ ಕಟ್ಟುತ್ತಿದ್ದರು. ನಮಗೆ ಸ್ವಂತ ಮನೆ ಅಂತ ಇರಲಿಲ್ಲ. ಈಗಲೂ ಬಾಡಿಗೆ ಮನೆಯಲ್ಲೇ ಇದ್ದೇವೆ. 3 ಸೆಂಟ್ಸ್ ಜಾಗದಲ್ಲಿ ಮನೆ ಕಟ್ಟಿಸಲು ತಂದೆ ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ. ತಂದೆ ಮತ್ತು ತಾಯಿ ದುಡಿದದ್ದನ್ನೆಲ್ಲಾ ನನ್ನ ವ್ಯಾಸಂಗಕ್ಕೆ ವ್ಯಯಿಸುತ್ತಿದ್ದರು. ತಂದೆ-ತಾಯಿಯ ಕಷ್ಟವೆಲ್ಲಾ ನನಗೆ ಗೊತ್ತಿತ್ತು. ಹಾಗಾಗಿ ನಾನು ಕೂಡ ಮಿತಿಯೊಳಗೆ ಕಲಿಕೆಗೆ ಖರ್ಚು ಮಾಡುತ್ತಿದ್ದೆ. ಅಗತ್ಯಕ್ಕಾಗಿ ಹಣ ಕೇಳಿದಾಗ ತಂದೆ ಇಲ್ಲ ಎಂದವರಲ್ಲ. ತಾನು ಕಷ್ಟದಲ್ಲಿದ್ದರೂ ಅದನ್ನು ತೋರಿಸದೆ ಸದಾ ನಗುತ್ತಾ ಹಣ ಕೊಡುತ್ತಿದ್ದರು. ಪ್ರೋತ್ಸಾಹದ ಮಾತುಗಳನ್ನಾಡುತ್ತಿದ್ದರು. ಉಮ್ಮ ಪ್ರತೀ ಹಂತದಲ್ಲಿ ಧೈರ್ಯ ತುಂಬುತ್ತಿದ್ದರು ಎಂದು ಸ್ಮರಿಸಿದರು.
ಸ್ಥಳೀಯ ಉರ್ದು ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪಡೆದೆ. ಬಳಿಕ ಹಂತ ಹಂತವಾಗಿ ಪ್ರೌಢ, ಪಿಯುಸಿ, ಇಲೆಕ್ಟ್ರಾನಿಕ್ಸ್ ಅ್ಯಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್ ಪದವಿ ಹೀಗೆ ಕಲಿಯುತ್ತಾ ಹೋದೆ. ಆವಾಗ ಉಮ್ಮ ಸಣ್ಣದಿರುವಾಗ ಐಎಎಸ್ ಅಧಿಕಾರಿಯಾಗುತ್ತೀಯಾ? ಎಂದು ಕೇಳಿದ್ದು, ನೆನಪಾಗುತ್ತಲೇ ಇತ್ತು. ಹಾಗೇ ಕಾಲೇಜು ಕಲಿಯುವಾಗ ಲೋಕಸೇವಾ ಆಯೋಗದ ಪರೀಕ್ಷೆಯ ಬಗ್ಗೆ ತಿಳಿದುಕೊಂಡೆ. ಅದಕ್ಕಾಗಿ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿ ಪರೀಕ್ಷೆ ಎದುರಿಸುತ್ತಾ ಹೋದೆ. ಇದೀಗ ಕೊನೆಯ ಹಂತದಲ್ಲಿ 345ನೆ ರ್ಯಾಂಕ್ ನೊಂದಿಗೆ ತೇರ್ಗಡೆ ಹೊಂದಿರುವೆ ಎಂದು ಖುಷಿ ವ್ಯಕ್ತಪಡಿಸಿದರು ಮುಹಮ್ಮದ್ ಶೌಕತ್ ಅಝೀಮ್.
ಎಸೆಸ್ಸೆಲ್ಸಿಯಲ್ಲಿ ಶೇ.92 ಮತ್ತು ಪಿಯುಸಿಯಲ್ಲಿ ಶೇ.74 ಅಂಕ ಗಳಿಸಿದ್ದೆ. ಅಂಕ ಕಡಿಮೆ ಬಂದೊಡನೆ ಉಮ್ಮನ ಮಾತು ನನ್ನನ್ನು ಮತ್ತೆ ಮತ್ತೆ ಎಚ್ಚರಿಸತೊಡಗಿತ್ತು. ಅಲ್ಲಿಂದಲೇ ಹೆಚ್ಚು ಶ್ರಮಪಟ್ಟು ಓದತೊಡಗಿದೆ. ಆದರೆ ಆರ್ಥಿಕ ಸಮಸ್ಯೆ ನನಗೆ ಕಾಡತೊಡಗಿತ್ತು. ತಂದೆ-ತಾಯಿಯು ನನಗೆ ಮಾತ್ರವಲ್ಲ, ನನ್ನೊಬ್ಬಳು ತಂಗಿಯ ಕಲಿಕೆಗೂ ಹಣ ಹೊಂದಿಸಬೇಕಿತ್ತು. ಆಕೆ ಇದೀಗ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ತೇರ್ಗಡೆ ಹೊಂದಿದ್ದಾಳೆ. ನನ್ನ ವಿದ್ಯಾಭ್ಯಾಸಕ್ಕೆ ಹಣಕಾಸಿನ ಸಮಸ್ಯೆ ಎದುರಾದಾಗ ಕಾರ್ಕಳದ ಉದ್ಯಮಿ ಕೆ.ಎಸ್. ಇಮ್ತಿಯಾಝ್ ಅಹ್ಮದ್ ನೆರವಿಗೆ ಬಂದರು. ಯಾವ ಕಾರಣಕ್ಕೂ ಶಿಕ್ಷಣ ಮೊಟಕುಗೊಳಿಸಬೇಡ ಎಂದು ಹೇಳಿ ಆರ್ಥಿಕ ಸಹಾಯ ಮಾಡಿ ಪ್ರೋತ್ಸಾಹಿಸಿದರು. ತಂದೆ ಮತ್ತು ತಾಯಿಯ ತ್ಯಾಗದ ಜೊತೆಗೆ ಕೆ.ಎಸ್. ಇಮ್ತಿಯಾಝ್ ಅಹ್ಮದ್ರ ಸಹಕಾರವನ್ನು ಮರೆಯಲು ನನಗೆ ಸಾಧ್ಯವೇ ಇಲ್ಲ ಎಂದು ಮುಹಮ್ಮದ್ ಶೌಕತ್ ಅಝೀಮ್ ಹೇಳಿದ್ದಾರೆ.
ಯುಪಿಎಸ್ಸಿ ಪರೀಕ್ಷೆ ಪಾಸಾಗಲು ಶೌಕತ್ ಅಝೀಮ್ ಅವರು ದೆಹಲಿಯ ಪ್ರತಿಷ್ಠಿತ ಹಂದರ್ದ್ ಸ್ಟಡಿ ಸರ್ಕಲ್ ತರಬೇತಿ ಕೇಂದ್ರವನ್ನು ಸೇರಿದ್ದರು. ತರಬೇತಿ ಜೊತೆಗೇ ಅಲ್ಲೇ ಉದ್ಯೋಗವನ್ನೂ ಮಾಡಿಕೊಂಡಿದ್ದರು. ಈ ಹಿಂದೆ 2022 ರಲ್ಲೂ ಯುಪಿಎಸ್ಸಿ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದ ಶೌಕತ್ ಅಝೀಮ್ ಅವರು ಭಾರತೀಯ ರಕ್ಷಣಾ ಇಲಾಖೆಯ ಲೆಕ್ಕ ಪರಿಶೋಧನೆ ಸೇವಾ ಅಧಿಕಾರಿಯಾಗಿ ನೇಮಕವಾಗಿ ಪುಣೆಯಲ್ಲಿ ಆ ಹುದ್ದೆಯಲ್ಲಿದ್ದಾರೆ. ಈಗ ಈ ವರ್ಷ ಇನ್ನಷ್ಟು ಉತ್ತಮ ರ್ಯಾಂಕ್ ಪಡೆದಿರುವುದರಿಂದ ಅವರಿಗೆ ಐಎಎಸ್ ಹುದ್ದೆಯೇ ಸಿಗುವ ನಿರೀಕ್ಷೆಯಿದೆ. ಕೊನೆಗೂ ಮುಹಮ್ಮದ್ ಶೌಕತ್ ಅಝೀಮ್ ಅವರ ನಿರಂತರ ಪ್ರಯತ್ನ, ಛಲ, ಶಿಸ್ತುಬದ್ಧ ತಯಾರಿ ಹಾಗು ಏಕಾಗ್ರತೆ ಫಲ ನೀಡಿದೆ, ಅವರ ತಂದೆ ತಾಯಿಯ ಕನಸು ನನಸಾಗಿದೆ. ಪುಟ್ಟ ಊರಿನ ಹುಡುಗ ದೇಶದ ಪ್ರತಿಷ್ಠಿತ ಪರೀಕ್ಷೆಯಲ್ಲಿ ಆಯ್ಕೆಯಾಗಿ ದೊಡ್ಡ ಸಾಧನೆ ಮಾಡಿದ್ದಾನೆ.