ಗಣರಾಜ್ಯೋತ್ಸವದಲ್ಲಿ ವಿಂಟೇಜ್ ಕಾರು-ಬೈಕುಗಳ ಪ್ರದರ್ಶನ
ಮಂಗಳೂರು, ಡಿ.22: ಮಂಗಳೂರು ಮೋಟಾರ್‌ಸ್ಪೋರ್ಟ್ಸ್ ಅಸೋಸಿಯೇಶನ್, ಸಂಘಟನಾ ಸಮಿತಿ ಸಹಭಾಗಿತ್ವದಲ್ಲಿ ಗಣರಾಜ್ಯೋತ್ಸವದ ಸಂಭ್ರಮದಂದು ನೆಹರೂ ಮೈದಾನದಲ್ಲಿ 22ನೆ ವಿಂಟೇಜ್ (ಅತೀ ಹಳೆಯ) ಕಾರು ಹಾಗೂ ಬೈಕ್‌ಗಳ ಪ್ರದರ್ಶನವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಕಾರ್ಯಕ್ರಮ ಸಂಘಟನಾ ಸಮಿತಿ ಅಧ್ಯಕ್ಷ ಮಿಥುನ್ ರೈ, ಅಂದು ಬೆಳಗ್ಗೆ 8ರಿಂದ ಸಂಜೆ 5 ಗಂಟೆಯವರೆಗೆ ಪ್ರದರ್ಶನ ನಡೆಯಲಿದ್ದು, ಪಿ.ಎಫ್.ಎಕ್ಸ್. ಸಲ್ಡಾನಾ ಅವರ 1906ರ ಮಾಡೆಲ್ ಹಾಗೂ ಮಂಗಳೂರಿನ ಪ್ರಥಮ ಕಾರು ಡೆ ಡಿಯಾನ್ ಬೌಟನ್ (ಪ್ರಸ್ತುತ ಈ ಕಾರು ಸಂತ ಅಲೋಶಿಯಸ್ ಕಾಲೇಜಿನ ಮ್ಯೂಸಿಯಂಗೆ ಕೊಡುಗೆಯಾಗಿ ನೀಡಲಾಗಿದೆ) ಈ ಪ್ರದರ್ಶದಲ್ಲಿ ವಿಶೇಷ ಆಕರ್ಷಣೆಯಾಗಿರಲಿದೆ ಎಂದರು.
ದ.ಕ. ಜಿಲ್ಲೆಗೆ ವಿಶೇಷ ಮೆರುಗು ನೀಡುವ ನಿಟ್ಟಿನಲ್ಲಿ ಈ ವಿಂಟೇಜ್ ಕಾರು ಮತ್ತು ಬೈಕುಗಳ ಪ್ರದರ್ಶನವನ್ನು ಈ ಬಾರಿ ವಿಶೇಷ ರೀತಿಯಲ್ಲಿ ಹಮ್ಮಿಕೊಳ್ಳಲು ಸಿದ್ಧತೆ ನಡೆಸಲಾಗುತ್ತಿದೆ. ರಾಜ್ಯದ ವಿವಿಧ ಭಾಗಗಳಿಂದ ಸುಮಾರು 75ಕ್ಕೂ ಅಧಿಕ ವಿಂಟೇಜ್ ಕಾರು ಹಾಗೂ ಬೈಕುಗಳು ಪ್ರದರ್ಶನದಲ್ಲಿ ಪಾಲ್ಗೊಳ್ಳಲಿವೆ ಎಂದು ಅವರು ಹೇಳಿದರು.
ಅಸೋಸಿಯೇಶನ್‌ನ ಅಧ್ಯಕ್ಷ ಸುಧೀರ್ ಬಿ.ಕೆ. ಮಾತನಾಡಿ, ಧರ್ಮಸ್ಥಳಧ ಡಾ. ವೀರೇಂದ್ರ ಹೆಗ್ಗಡೆ ಅವರಲ್ಲಿರುವ ಹಲವು ವಿಂಟೇಜ್ ಕಾರುಗಳನ್ನು ಪ್ರದರ್ಶನಕ್ಕೆ ಒಪ್ಪಿಕೊಂಡಿದ್ದಾರೆ. ಆರೂರು ಕಿಶೋರ್ ರಾವ್ ಅವರ 1948ರ ಮಾಡೆಲ್‌ನ ರಾಲ್ಸ್ ರಾಯ್ ಸಿಲ್ವರ್ ವ್ರೇತ್, 1948ರ ಬೆಂಟ್ಲಿ ಎಂಕೆ ವಿಐ, 1949ರ ಕ್ಯಾಡಿಲ್ಯಾಕ್ ಎಲ್‌ಎಚ್, ಬೆಂಗಳೂರಿನ ಲ್ಯೂಕ್ ರೆಬೆಲ್ಲೋ ಅವರ 1925ರ ರಾಲ್ಸ್‌ರಾಯ್ಸ್, ಕೃಷ್ಣಪ್ಪ ಉಚ್ಚಿಲ್ ಅವರ ಫೋರ್ಡ್ ಕಾರು, ಹೇಮರಾಜ್ ಅವರ ಹಿತ್ತಾಳೆಯ ಶೆವರ್ಲೆಟ್ ಮೊದಲಾದ ಕಾರುಗಳು ಪ್ರದರ್ಶನದಲ್ಲಿರಲಿವೆ ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾಧ್ಯಮ ಸಂಯೋಜಕ ಯತೀಶ್ ಬೈಕಂಪಾಡಿ ಉಪಸ್ಥಿತರಿದ್ದರು.