ರಾಜ್ಯವನ್ನು 18 ಬಾರಿ ಸುತ್ತಿದ್ದೇನೆ, ಸಂಘಟನೆ ಕಾರ್ಯ ಯಶಸ್ವಿಯಾಗಿದೆ : ನಳೀನ್ ಕುಮಾರ್ ಕಟೀಲ್
ನಳೀನ್ ಕುಮಾರ್ ಕಟೀಲ್
ಮಂಗಳೂರು, ನ.10: ನಾನು ರಾಜ್ಯ ಬಿಜೆಪಿ ಅಧ್ಯಕ್ಷನಾಗಿ ಅಧಿಕಾರಿ ವಹಿಸಿಕೊಂಡಾಗ ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾಗಿದ್ದೆ. ನನಗೆ ಪ್ರವಾಸ ಮಾಡಿ ಅನುಭವ ಇಲ್ಲ ಎಂಬ ಮಾತು ಕೇಳಿ ಬಂದಿತ್ತು. ಆದರೆ 18 ಬಾರಿ ರಾಜ್ಯ ವನ್ನು ಸುತ್ತಿ ಸಂಘಟನೆ ಮಾಡಿರುವುದಾಗಿ ರಾಜ್ಯ ಬಿಜೆಪಿಯ ಅಧ್ಯಕ್ಷ ಹಾಗೂ ಸಂಸದ ನಳೀನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ನಗರದ ಕದ್ರಿಯಲ್ಲಿರುವ ನಿರೀಕ್ಷಣಾ ಮಂದಿರದಲ್ಲಿ ಶುಕ್ರವಾರ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಮ್ಮ ನೇತೃತ್ವದಲ್ಲಿ ಪಕ್ಷದ ಸಂಘಟನೆ ಕಾರ್ಯ ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ.
ನನಗೆ ನಾಲ್ಕುವರೆ ವರ್ಷಗಳ ಕಾಲ ರಾಜ್ಯ ಬಿಜೆಪಿ ಅಧ್ಯಕ್ಷನಾಗಿ, ಕೇರಳ ಉಸ್ತುವಾರಿಯಾಗಿ ಸೇವೆ ಸಲ್ಲಿಸುವ ಅವಕಾಶ ವನ್ನು ಹೈಕಮಾಂಡ್ ನೀಡಿತ್ತು. ಮತಗಟ್ಟೆಯಿಂದ ಪಕ್ಷವನ್ನು ಸಂಘಟನೆ ಮಾಡಿದ್ದೇನೆ ಎಂದರು.
ಪಂಚಾಯತ್ ಚುನಾವಣೆ, ಉಪಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಬಿಜೆಪಿ ಜಯ ಗಳಿಸಿತ್ತು. ಒಂದು ಒಂದು ಲೋಕಸಭಾ ಉಪ ಚುನಾವಣೆ, ರಾಜ್ಯ ಸಭೆ, ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷ ಜಯ ಗಳಿಸಿತ್ತು. ಆದರೆ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಸೋಲಾಗಿತ್ತು. ಇಡೀ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಕಟ್ಟಿದ್ದೇನೆ. ಬಿ.ಎಸ್.ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ ಡಿ.ವಿ.ಸದಾನಂದ ಗೌಡ, ಪ್ರಹ್ಲಾದ್ ಜೋಶಿ ಮತ್ತಿತರ ಹಿರಿಯ ನಾಯಕರ ಆಶೀರ್ವಾದದಿಂದ ತಮಗೆ ಪಕ್ಷವನ್ನು ಸಂಘಟಿಸಲು ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ರಾಜ್ಯ ಬಿಜೆಪಿ ಉಪಾಧ್ಯಕ್ಷನಾಗಿದ್ದ ವಿಜಯೇಂದ್ರ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಘೋಷಣೆ ಮಾಡಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ವಿಜಯೇಂದ್ರ ಎರಡು ಅವಧಿಗೆ ಬಿಜೆಪಿ ಯುವ ಮೋರ್ಚಾದ ಕಾರ್ಯವನ್ನು ವಿಸ್ತಾರ ಮಾಡಿ ರಾಜ್ಯ ಉಪಾಧ್ಯಕ್ಷನಾಗಿ ನಮ್ಮ ಜೊತೆ ಇಡೀ ರಾಜ್ಯದಲ್ಲಿ ಪ್ರವಾಸ ಮಾಡಿದ್ದಾರೆ. ಓರ್ವ ಅತ್ಯುತ್ತಮ ಸಂಘಟಕರಾಗಿರುವ ವಿಜಯೇಂದ್ರ ಅವರು ಸಾಮಾನ್ಯ ಕಾರ್ಯಕರ್ತನಾಗಿ ಬಂದವರು. ಇವತ್ತು ಅವರನ್ನು ಅಧ್ಯಕ್ಷನಾಗಿ ಆಯ್ಕೆ ಮಾಡುವ ಮೂಲಕ ಪಕ್ಷದಲ್ಲಿ ಹೊಸ ಹುರುಪು ಮತ್ತು ಉತ್ಸಾಹ ಕಾರ್ಯಕರ್ತರಲ್ಲಿ ಕಂಡು ಬಂದಿದೆ. ಅವರಿಗೆ ಮುಂದೆ ಪಕ್ಷದ ಸಂಘಟಿಸಲು ಮಾರ್ಗದರ್ಶನ ನೀಡುವುದಾಗಿ ತಿಳಿಸಿದರು.
ಕಳೆದ ಆರು ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ ಆಡಳಿತದಲ್ಲಿ ಕಾಂಗ್ರೆಸ್ನ ಸಂಪೂರ್ಣವಾದ ವೈಫಲ್ಯ ಕಾಣುತ್ತಿದೆ. ಅಭಿವೃದ್ಧಿ ಕಾರ್ಯ ಕುಂಠಿತವಾಗಿದೆ. ಭ್ರಷ್ಟಾಚಾರ ತಾಂಡವಾಡುತ್ತಿದೆ. ಬರ ನಿರ್ವಹಣೆಯಲ್ಲಿ ಕಾಂಗ್ರೆಸ್ ಸರಕಾರ ವಿಫಲವಾಗಿದೆ. ಇವುಗಳ ವಿರುದ್ಧ ಹೋರಾಟ ಕೈಗೊಂಡು ಪಕ್ಷವನ್ನು ಮತಗಟ್ಟೆಯಿಂದ ಸಂಘಟನೆ ಮಾಡುವ ಶಕ್ತಿ ವಿಜಯೇಂದ್ರ ಅವರಲ್ಲಿದೆ. ಮತ್ತೆ ವಿಜಯೇಂದ್ರ ನೇತೃತ್ವದಲ್ಲಿ ಪಕ್ಷ ಅಧಿಕಾರಕ್ಕೆ ತರುವ ಪ್ರಯತ್ನ ನಡೆಸಲಾಗುವುದು ಎಂದರು.