ದಾಂಡೇಲಿ | ಕೈ ಕೊಯ್ದುಕೊಂಡ ಒಂದೇ ಶಾಲೆಯ 14 ಮಂದಿ ವಿದ್ಯಾರ್ಥಿನಿಯರು: ಕಾರಣ ಮಾತ್ರ ನಿಗೂಢ
ಜಿಲ್ಲಾಧಿಕಾರಿ ಹೇಳಿದ್ದೇನು?
ಗಂಗೂಬಾಯಿ ಮಾನಕರ್- ಜಿಲ್ಲಾಧಿಕಾರಿ
ದಾಂಡೇಲಿ: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಖಾಸಗಿ ಶಾಲೆಯ 14 ವಿಧ್ಯಾರ್ಥಿನಿಯರು ಸಾಮೂಹಿಕವಾಗಿ ಕೈ ಕೊಯ್ದುಕೊಂಡಿದ್ದು, ಕಾರಣ ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ.
9 ಮತ್ತು 10 ನೇ ತರಗತಿಯ ಒಟ್ಟು 14 ವಿಧ್ಯಾರ್ಥಿನಿಯರು ಯಾವುದೋ ಹರಿತವಾದ ವಸ್ತುಗಳಿಂದ ಕೈಯನ್ನು ರಕ್ತ ಬರುವಂತೆ ಸೀಳಿಕೊಂಡಿದ್ದು ಕಂಡು ಬಂದಿದೆ.
ಈ ಕುರಿತು ಶಿಕ್ಷಕರು ಮಾಹಿತಿ ಕೇಳಿದರೆ ಸರಿಯಾಗಿ ಉತ್ತರವನ್ನೇ ವಿದ್ಯಾರ್ಥಿನಿಯರು ಕೊಟ್ಟಿರಲಿಲ್ಲ. ಪೋಷಕರ ಗಮನಕ್ಕೆ ತಂದು ಅವರಿಂದಲೂ ವಿದ್ಯಾರ್ಥಿನಿಯರನ್ನು ಮಾತನಾಡಿಸಿದಾಗ ಆಗಲೂ ವಿದ್ಯಾರ್ಥಿನಿಯರು ಹಾರಿಕೆ ಉತ್ತರ ಕೊಟ್ಟಿದ್ದಾರೆ ಎಂದು ಹೇಳಲಾಗಿದೆ. ವಿದ್ಯಾರ್ಥಿನಿಯರು ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದರೋ ಅಥವಾ ಶಾಲೆಯಲ್ಲಿ ಯತ್ನಿಸಿದರೋ ಎಂಬ ಮಾಹಿತಿ ಹೊರಬರಬೇಕಿದೆ.
ಶನಿವಾರ ಈ ಘಟನೆ ನಡೆದಿದ್ದು, ತಡವಾಗಿ ಶಾಲಾ ಅಡಳಿತ ಮಂಡಳಿಯ ಗಮನಕ್ಕೆ ಬಂದಿದೆ ಎನ್ನಲಾಗಿದೆ. ಕೂಡಲೇ ಅವರನ್ನು ದಾಂಡೇಲಿ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ಕರೆದೊಯ್ಯಲಾಗಿತ್ತು. ಎಲ್ಲರೂ ಆರೋಗ್ಯದಿಂದ ಇದ್ದಾರೆ ಎಂದು ತಿಳಿದು ಬಂದಿದೆ.
ಜಿಲ್ಲಾಧಿಕಾರಿ ಹೇಳಿದ್ದೇನು?
ಘಟನೆ ಬಗ್ಗೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಪ್ರತಿಕ್ರಿಯಿಸಿ, ʼʼಮಕ್ಕಳು ಯಾವ ಕಾರಣಕ್ಕಾಗಿ ಕೈ ಕೊಯ್ದುಕೊಂಡಿದ್ದಾರೆ ಎಂದು ಮಾಹಿತಿ ನೀಡುತ್ತಿಲ್ಲ. ಈ ವಿಚಾರ ನನ್ನ ಗಮನಕ್ಕೆ ಬಂದ ತಕ್ಷಣ ತಹಶೀಲ್ದಾರ್ ಮತ್ತು ಶಿಕ್ಷಣ ಅಧಿಕಾರಿ ಜೊತೆ ಮಾತನಾಡಿ ವರದಿ ಕೊಡುವಂತೆ ಸೂಚನೆ ನೀಡಿದ್ದೆ. ಆದರೆ ವಿದ್ಯಾರ್ಥಿಗಳು ವಿಚಾರಣೆ ವೇಳೆ ಅಧಿಕಾರಿಗಳಿಗೆ ಹಾರಿಕೆ ಉತ್ತರ ಕೊಟ್ಟಿದ್ದಾರೆʼʼ ಎಂದು ಮಾಹಿತಿ ನೀಡಿದರು.
ʼʼಘಟನೆ ಬಗ್ಗೆ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆಯವರಿಗೂ ತನಿಖೆ ಮಾಡಲು ತಿಳಿಸಿದ್ದೇವೆ. ಶಾಲೆಯಲ್ಲಿ ತೊಂದರೆ ಇದೆಯೇ ಎನ್ನುವ ಬಗ್ಗೆ ತನಿಖೆ ನಡೆಸಿದ್ದೇವೆ. ಆರೋಗ್ಯ ಇಲಾಖೆಯಿಂದ ಮಕ್ಕಳಿಗೆ ಕೌನ್ಸಿಲಿಂಗ್ ಮಾಡಲು ತಿಳಿಸಲಾಗಿದ್ದು, ಕೌನ್ಸಿಲಿಂಗ್ ನಂತರ ಮಕ್ಕಳು ಕೈ ಕೊಯ್ದುಕೊಂಡಿರುವ ಬಗ್ಗೆ ಮಾಹಿತಿ ಸಿಗಲಿದೆʼʼ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ತಿಳಿಸಿದರು.