ಮೇ 7 ರಿಂದ ಅಂತರ್ ರಾಷ್ಟ್ರೀಯ ಕನ್ನಡ ಸಮ್ಮೇಳನ
ಬೆಂಗಳೂರು : ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ವಿಶ್ವ ಕನ್ನಡಿಗರ ಟ್ರಸ್ಟ್ ವತಿಯಿಂದ ದಾವಣಗೆರೆ ನಗರದಲ್ಲಿ ಮೇ 7 ರಿಂದ 12ರ ವರೆಗೆ ಅಂತರ್ ರಾಷ್ಟ್ರೀಯ ಕನ್ನಡ ಸಮ್ಮೇಳನ ನಡೆಯಲಿದೆ ಎಂದು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ವಾಮದೇವಪ್ಪ ತಿಳಿಸಿದ್ದಾರೆ.
ಗುರುವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಆರು ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ಸಾಹಿತ್ಯ ಚರ್ಚೆಗಳು, ಕಲಾ ಕಾರ್ಯಕ್ರಮಗಳು ಹಾಗೂ ಉದ್ಯೋಗ ಮೇಳ ನಡೆಯಲಿದೆ. ಮೇ 7ರಂದು ಸಾಹಿತ್ಯ ಮೇಳ, ಮೇ 8 ರಂದು ಯೂ ಟ್ಯೂರ್ಸ್ ಮೇಳ, ಮೇ 9 ರಂದು ಶಿಕ್ಷಣ ಮೇಳ, ಮೇ 10 ರಂದು ಸಿನಿ ಸಾಹಿತ್ಯ ಮತ್ತು ಕಲಾವಿದರ ಮೇಳ, ಮೇ 11 ರಂದು ಕೃಷಿ ಮೇಳ, ಮೇ 12 ಉದ್ಯೋಗ ಮೇಳ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಕಾರ್ಯಕ್ರಮಗಳೆಲ್ಲವೂ ಬಸವಣ್ಣರ ವೇದಿಕೆ, ಸರ್ವಜ್ಞ ವೇದಿಕೆ ಹಾಗೂ ರಾಣಿ ಚೆನ್ನಮ್ಮ ವೇದಿಕೆ ಎಂಬ ಮೂರು ವೇದಿಕೆಗಳಲ್ಲಿ ನಡೆಸಲಾಗುವುದು. ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯ ವರೆಗೆ ನಡೆಯಲಿವೆ. ಹೊಸ ಸಾಹಿತಿಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಮೇ 7 ರಂದು ನವ ಲೇಖಕರ ಮೇಳ, ಪ್ರಕಾಶಕರ ಮೇಳ ಹಾಗೂ ಸಾಮಾಜಿಕ ಬರಹಗಾರರ ಮೇಳ ಆಯೋಜಿಸಲಾಗಿದೆ ಎಂದು ವಾಮದೇವಪ್ಪ ತಿಳಿಸಿದ್ದಾರೆ.
ಸಮ್ಮೇಳನದಲ್ಲಿ ಭಾಗವಹಿಸಲು ವೆಬ್‍ಸೈಟ್ http://kannadasammelana.com ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಸಾಹಿತಿಗಳು, ಕಲಾವಿದರು, ಪತ್ರಕರ್ತರು ಮತ್ತು ಕನ್ನಡಾಭಿಮಾನಿಗಳು ಈ ಮಹತ್ವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು. ಈ ಅಂತರಾಷ್ಟ್ರೀಯ ಕನ್ನಡ ಸಮ್ಮೇಳನದಲ್ಲಿ ವಿಶ್ವದ ಹಲವಾರು ಕನ್ನಡ ಸಾಹಿತಿಗಳು, ಲೇಖಕರು, ಕಲಾವಿದರು, ಚಿತ್ರಪಟ ನಿರ್ದೇಶಕರು, ಕೃಷಿ ತಜ್ಞರು, ಉದ್ಯೋಗ ನಿಪುಣರು ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕನ್ನಡ ಭಾಷಾ ಮತ್ತು ಸಂಸ್ಕೃತಿಯ ಮಹಾ ಉತ್ಸವವಾಗಲಿದೆ. ಸಮ್ಮೇಳನದ ಯಶಸ್ಸಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಸೇರಿದಂತೆ ಪ್ರಮುಖರು ಸಹಕಾರ ನೀಡಲಿದ್ದಾರೆ ಎಂದು ವಾಮದೇವಪ್ಪ ತಿಳಿಸಿದ್ದಾರೆ.