ಸಾವಿರ ಕೋಟಿ ರೂ. ಇಟ್ಟುಕೊಂಡು ಸಿಎಂ ಆಗಲು ಸಿದ್ಧತೆ : ಬಿಜೆಪಿ, ಕಾಂಗ್ರೆಸ್ ವಿರುದ್ಧ ಯತ್ನಾಳ್ ಆರೋಪ
ಬಸನಗೌಡ ಪಾಟೀಲ್ ಯತ್ನಾಳ್
ದಾವಣಗೆರೆ : ಕೆಲವರು ಮುಖ್ಯಮಂತ್ರಿ ಆಗಬೇಕೆಂದು ಸಾವಿರ ಕೋಟಿ ರೂ.ಇಟ್ಟುಕೊಂಡು ಕಾಯುತ್ತಿದ್ದಾರೆ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼಇದರಲ್ಲಿ ಕಾಂಗ್ರೆಸ್ನವರೂ ಇದ್ದಾರೆ, ಬಿಜೆಪಿಯವರೂ ಇದ್ದು, ಸಾವಿರ ಕೋಟಿ ಹಣ ಇಟ್ಟುಕೊಂಡು ಮುಖ್ಯಮಂತ್ರಿ ಆಗಲು ಹಲವರು ಸಿದ್ಧತೆ ನಡೆಸಿದ್ದಾರೆʼ ಎಂದು ಹೇಳಿದರು.
ನಮ್ಮಲ್ಲೂ ಭ್ರಷ್ಟಾಚಾರದಿಂದ ಮಾಡಿದ ಬಹಳಷ್ಟು ದುಡ್ಡು ಇರುವಂತಹ ಕೆಲವರಿಗೆ ಕುದುರೆ ವ್ಯಾಪಾರದ ಆಸೆ ಇರಬಹುದು. ಬಿಜೆಪಿ ಪಕ್ಷ ಕುದುರೆ ವ್ಯಾಪಾರವನ್ನು ಒಪ್ಪುವುದಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷರಿಗೆ ಚಿತ್ರದುರ್ಗದಲ್ಲಿ ಒಂದು ಸಂಸ್ಕಾರ ಆಗಿದೆ. ಇನ್ನೊಂದು ಅವರದ್ದೇ ಮನೆಯಲ್ಲಿ ಆಗಿದೆ ಎಂದು ವ್ಯಂಗ್ಯವಾಡಿದರು.
ಗ್ಯಾರಂಟಿಯಿಂದಲೇ ಕಾಂಗ್ರೆಸ್ ಸರಕಾರ ಸಂಪೂರ್ಣ ದಿವಾಳಿಯಾಗಿದ್ದು, ಕಾಂಗ್ರೆಸ್ ಸರಕಾರ ವಿಸರ್ಜನೆಯಾಗುತ್ತಿದ್ದಂತೆಯೇ ಚುನಾವಣೆ ನಡೆದು ಪೂರ್ಣ ಬಹುಮತದೊಂದಿಗೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಭವಿಷ್ಯ ನುಡಿದರು.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ವಿರುದ್ಧ ನಾವೇನೂ ಷಡ್ಯಂತ್ರ ಮಾಡುತ್ತಿಲ್ಲ. ಸಿದ್ದರಾಮಯ್ಯವರ ಹಗರಣ ದಾಖಲೆಗಳನ್ನು ನೀಡಿ, ಅದನ್ನು ಹೊರ ತೆಗೆದಿದ್ದೇ ಕಾಂಗ್ರೆಸ್ನವರು ಎಂದು ಯತ್ನಾಳ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಂಸದರಾದ ಪ್ರತಾಪಸಿಂಹ, ಜಿ.ಎಂ.ಸಿದ್ದೇಶ್ವರ್, ಶಾಸಕ ಬಿ.ಪಿ.ಹರೀಶ್, ಬಿಜೆಪಿ ಪರಾಜಿತ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್, ಬಿಜೆಪಿ ಮಾಜಿ ಅಧ್ಯಕ್ಷರಾದ ಯಶವಂತ ರಾವ್ ಜಾಧವ್, ವೀರೇಶ್ ಹನಗವಾಡಿ, ಶಿವಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಗೆ ನಾವು ಪಟ್ಟು ಹಿಡಿದಿಲ್ಲ. ಅದರ ಬಗ್ಗೆ ಚರ್ಚೆಯೂ ಆಗಿಲ್ಲ. ನಾವು 38 ಜನರು ಎಲ್ಲಿ ಹೇಳಬೇಕೋ ಅಲ್ಲಿಯೇ ಹೇಳಿದ್ದೇವೆ. ಮುಂದಿನ ಕ್ರಮ ಏನು ಕೈಗೊಳ್ಳಬೇಕೆಂಬುದು ಹೈಕಮಾಂಡ್ಗೆ ಬಿಟ್ಟ ವಿಚಾರ. ಬಹಿರಂಗವಾಗಿ ಮಾತನಾಡದಂತೆ ಹೈಕಮಾಂಡ್ ಸೂಚನೆ ನೀಡಿದೆ. ನಮ್ಮ ವರಿಷ್ಠರು ಯೋಗ್ಯ ನಿರ್ಣಯ ಕೈಗೊಳ್ಳುತ್ತಾರೆಂಬ ವಿಶ್ವಾಸವಿದೆ.
-ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ