ಡಿ.ಕೆ.ಶಿವಕುಮಾರ್ ಈ ಅವಧಿಯಲ್ಲೇ ಮುಖ್ಯಮಂತ್ರಿ ಆಗುತ್ತಾರೆ : ಶಾಸಕ ಬಸವರಾಜ್ ವಿ.ಶಿವಗಂಗಾ
ಡಿ.ಕೆ.ಶಿವಕುಮಾರ್(PTI)
ದಾವಣಗೆರೆ : "ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬಹಳ ಕಷ್ಟಪಟ್ಟಿದ್ದಾರೆ. ಅವರು ಪಟ್ಟಿರುವ ಕಷ್ಟಕ್ಕೆ ತಕ್ಕ ಪ್ರತಿಫಲ ಇದ್ದೇ ಇದೆ. ಈ ಅವಧಿಯಲ್ಲೇ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುತ್ತಾರೆ" ಎಂದು ಚನ್ನಗಿರಿಯ ಕಾಂಗ್ರೆಸ್ ಶಾಸಕ ಬಸವರಾಜ್ ವಿ.ಶಿವಗಂಗಾ ತಿಳಿಸಿದರು.
ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʼಅಧಿಕಾರ ಹಂಚಿಕೆ ಯಾವುದೂ ಇಲ್ಲ. ಹೈಕಮಾಂಡ್ ತೀರ್ಮಾನವೇ ಅಂತಿಮ. ಹಿಂದೆಯೂ ಹೇಳಿದ್ದೇನೆ ಈಗಲೂ ಹೇಳುತ್ತೇನೆ, ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆʼ ಎಂದರು.
ಡಿ.ಕೆ.ಶಿವಕುಮಾರ್ ಅವರು ಐದು ವರ್ಷದ ಕಾಲಾವಧಿಗೆ ಮುಖ್ಯಮಂತ್ರಿ ಆಗಬೇಕಿತ್ತು. ಕೆಲ ಬೆಳವಣಿಗೆಯಿಂದ ಸಿದ್ದರಾಮಯ್ಯ ಅವರು ಆಗಿದ್ದಾರೆ. ಒಳ್ಳೆಯ ಆಡಳಿತ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಕುರ್ಚಿ ಖಾಲಿಯಾದ ತಕ್ಷಣ ನಾವು ಹಕ್ಕು ಮಂಡಿಸುತ್ತೇವೆ ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ಅವರು ಶೃಂಗೇರಿಯಲ್ಲಿ ಒಳ್ಳೆಯ ಅರ್ಥದಲ್ಲೇ ಮಾತನಾಡಿದ್ದಾರೆ. ಅವರು ನೀಡಿರುವ ಹೇಳಿಕೆಯನ್ನು ನೋಡುವ ದೃಷ್ಟಿಕೋನದ ಮೇಲೆ ಹೋಗುತ್ತದೆ. ಕೆಟ್ಟದಾಗಿ ನೋಡಿದರೆ ಕೆಟ್ಟದ್ದಾಗಿ, ಒಳ್ಳೆಯ ರೀತಿಯಲ್ಲಿ ನೋಡಿದರೆ ಒಳ್ಳೆಯದಾಗಿ ಕಾಣುತ್ತದೆ ಎಂದು ತಿಳಿಸಿದರು.
ಡಿ.ಕೆ.ಶಿವಕುಮಾರ್ ಶಾಸಕರನ್ನು ಗೆಲ್ಲಿಸುವಲ್ಲಿ ಸಾಕಷ್ಟು ಕಷ್ಟಪಟ್ಟಿದ್ದಾರೆ. ನಾವೆಲ್ಲ ಒಗ್ಗಟ್ಟಾಗಿಯೇ ಇದ್ದೇವೆ. ಏನಾದರೂ ತೀರ್ಮಾನ ತೆಗೆದು ಕೊಳ್ಳಬೇಕಾದರೆ ಅದು ಹೈಕಮಾಂಡ್ ಇದೆ. ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತಿದೆ ಎಂದು ತಿಳಿಸಿದರು.