ʼಜಾತಿಗಣತಿʼ ಸಾಕಷ್ಟು ಗೊಂದಲಗಳಿಂದ ಕೂಡಿದೆ, ಅದನ್ನು ಒಪ್ಪುವುದಿಲ್ಲ : ಕಾಂಗ್ರೆಸ್ ಶಾಸಕ ಬಸವರಾಜು ಶಿವಗಂಗಾ
ಬಸವರಾಜು ಶಿವಗಂಗಾ
ದಾವಣಗೆರೆ: ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿ ಬಿಡುಗಡೆ ತೀವ್ರ ಚರ್ಚೆಗೆ ಗ್ರಾಸವಾಗುತ್ತಿರುವ ಬೆನ್ನಲ್ಲೇ ಆಡಳಿತರೂಢ ಕಾಂಗ್ರೆಸ್ ಪಕ್ಷದ ಶಾಸಕ ಬಸವರಾಜು ಶಿವಗಂಗಾ ʼಜಾತಿಗಣತಿಯನ್ನು ಒಪ್ಪಲು ಸಾಧ್ಯವೇ ಇಲ್ಲʼ ಎನ್ನುವ ಮೂಲಕ ತಮ್ಮದೇ ಸರಕಾರದ ವಿರುದ್ಧ ಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ 10 ವರ್ಷಗಳ ಹಿಂದೆ ನಡೆದಿರುವ ʼಜಾತಿಗಣತಿʼ ಸಾಕಷ್ಟು ಗೊಂದಲಗಳಿಂದ ಕೂಡಿದೆ. ಇದನ್ನು ಯಾವುದೇ ಕಾರಣಕ್ಕೂ ನಾನು ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಜಾತಿಜನಗಣತಿ ವಿಚಾರದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರೂ ಆಗಿರುವ ಶಾಸಕ ಶಾಮನೂರು ಶಿವಶಂಕರಪ್ಪ ತಳೆದಿರುವ ನಿಲುವಿಗೆ ನಾನೂ ಬದ್ಧನಾಗಿದ್ದೇನೆ. ಸರಕಾರ ವರದಿ ಹೊರತರುವುದಕ್ಕೂ ಮುನ್ನ ಚರ್ಚಿಸಬೇಕಿತ್ತು. ವರದಿ ಬಿಡುಗಡೆಗೊಳಿಸಿ ತಿದ್ದುಪಡಿಗೆ ಮುಂದಾದರೆ ಸರಕಾರಕ್ಕೆ ಮುಜುಗರ ಎಂದು ಪ್ರತಿಕ್ರಿಯಿಸಿದರು.
ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ ಸಾದರ ಲಿಂಗಾಯತ ಸಮುದಾಯ 67 ಸಾವಿರ ಇದೆ ಎಂಬುದಾಗಿ ಹೇಳುತ್ತಿದೆ. ಆದರೆ ಚನ್ನಗಿರಿ ವಿಧಾನಸಭಾ ಕ್ಷೇತ್ರವೊಂದರಲ್ಲೇ ಅಂದಾಜು 60 ಸಾವಿರ ಸಾದರ ಲಿಂಗಾಯತ ಸಮುದಾಯವಿದೆ. ಹಾಗಾಗಿ ಯಾವ ರೀತಿಯಲ್ಲಿ ಈ ಗಣತಿ ಮಾಡಲಾಗಿದೆ ಎನ್ನುವುದೇ ಅರ್ಥವಾಗುತ್ತಿಲ್ಲ ಎಂದು ಸಮಾಧಾನ ವ್ಯಕ್ತಪಡಿಸಿದರು.