ಚನ್ನಗಿರಿ| ಸರಕಾರಿ ಶಾಲಾ ಜಾಗದಲ್ಲಿ ನಿರ್ಮಾಣ: ದೊಡ್ಡಬ್ಬಿಗೆರೆ ಸರಕಾರಿ ಶಾಲೆಗೆ ನ್ಯಾಯಾಧೀಶರ ಭೇಟಿ
ʼವಾರ್ತಾ ಭಾರತಿʼ ಫಲಶ್ರುತಿ
ದಾವಣಗೆರೆ: ಚನ್ನಗಿರಿ ತಾಲೂಕಿನ ಗ್ರಾಮದ ಸರಕಾರ ಶಾಲಾ ನಿವೇಶನದಲ್ಲಿ ಶಿಕ್ಷಣ ಇಲಾಖೆಯ ಪರವಾನಿಗೆ ಇಲ್ಲದೆ ರಂಗಮಂದಿರ ನಿರ್ಮಾಣ ನಡೆಯುತ್ತಿರುವ ಕುರಿತು ‘ವಾರ್ತಾಭಾರತಿ’ ಪತ್ರಿಕೆಯು ನವೆಂಬರ್ 7 ರಂದು ವರದಿ ಮಾಡಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ದಾವಣಗೆರೆ ಜಿಲ್ಲಾ ನ್ಯಾಯಾಲಯ, ವರದಿ ನೀಡುವಂತೆ ಚನ್ನಗಿರಿ ನ್ಯಾಯಾಲಯಕ್ಕೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ವಿಶ್ವನಾಥ ವಿ.ಮುಗುತಿ ಹಾಗೂ ಪ್ರಧಾನ ಸಿವಿಲ್ ನ್ಯಾಯಾಧೀಶ ಸಿದ್ದಲಿಂಗಯ್ಯ ಗಂಗಾಧರ ಮಠ ಅವರು ಗುರುವಾರ ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ವಿಶ್ವನಾಥ ಮುಗುತಿ, ಶಿಕ್ಷಣ ಇಲಾಖೆಯ ಅನುಮತಿ ಇಲ್ಲದೆ ರಂಗಮಂದಿರ ಕಟ್ಟಡ ನಿರ್ಮಾಣ ಮಾಡಲಾಗಿದೆ. ನಿರ್ಮಾಣಕ್ಕೆ ನಿರ್ಮಿತಿ ಕೇಂದ್ರದಿಂದ 5 ಲಕ್ಷ ರೂ. ಅಂದಾಜ ವೆಚ್ಚವಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ 3.75 ಲಕ್ಷ ರೂ. ಬಿಡುಗಡೆ ಮಾಡಿದೆ. ಆದರೆ, ಅಗರ ಬನ್ನಿಹಟ್ಟಿಗೆ ಮಂಜೂರಾಗಿದ್ದ ರಂಗಮಂದಿರವನ್ನು ದೊಡ್ಡಬ್ಬಿಗೆರೆಗೆ ಸ್ಥಳಾಂತರಿಸಿ ಸರಕಾರಿ ಶಾಲಾ ನಿವೇಶನದಲ್ಲಿ ಅನುಮತಿ ಇಲ್ಲದೆ ನಿರ್ಮಾಣ ಮಾಡಿರುವ ಕುರಿತು ವರದಿ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು.
ಶಾಲಾ ಕಟ್ಟಡ ಗ್ರಾಮದ ಹೊರವಲಯದಲ್ಲಿದೆ. ಹೀಗಾಗಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ಗ್ರಾಮದ ಮಧ್ಯದಲ್ಲಿರುವ ಹಳೇ ಶಾಲಾ ನಿವೇಶನದಲ್ಲಿ ರಂಗಮಂದಿರ ನಿರ್ಮಾಣ ಮಾಡಲಾಗಿದೆ. ಇದಕ್ಕೆ ಎನ್‌ಒಸಿ ಕೊಡುವ ಮೂಲಕ ಸಹಕರಿಸಬೇಕೆಂದು ಗ್ರಾಮಸ್ಥರು ನ್ಯಾಯಾಧೀಶರಲ್ಲಿ ಮನವಿ ಮಾಡಿದರು.
ತಹಶೀಲ್ದಾರ್ ಯರ್ರಿಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ, ಬಿಇಒ ಜಯಪ್ಪ, ಇಸಿಒ ಕುಬೇರಪ್ಪ, ತಾಪಂ ಮಾಜಿ ಸದಸ್ಯ ಕೊಟ್ರಬಸಪ್ಪ, ಗ್ರಾಪಂ ಅಧ್ಯಕ್ಷ ಗಿರಿತಿಮ್ಮಪ್ಪ, ಸದಸ್ಯ ಪರಮೇಶ್ವರಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಶ್ರೀ ಕೃಷ್ಣ, ಮುಖ್ಯಶಿಕ್ಷಕ ಶಿಲ್ಪಾಚಾರ್ ಇದ್ದರು.