ದಾವಣಗೆರೆ| ನನ್ನನ್ನು ತೆಗೆಯಲು ಕೆಲವರು ಕಾಯುತ್ತಿದ್ದಾರೆ: ಸಂಸದ ಜಿ.ಎಂ ಸಿದ್ದೇಶ್ವರ

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ತಪ್ಪಿಸಬೇಕು. ದಾವಣಗೆರೆಯಿಂದ ಓಡಿಸಬೇಕು ಎಂದುಕೊಂಡಿದ್ದಾರೆ. ಇದು ರಾಜಕೀಯ ದ್ವೇಷ ಬಿಟ್ಟರೆ ಬೇರೆ ಏನೂ ಇಲ್ಲ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ತೆಗೆಯಬೇಕೆಂದುಕೊಂಡಿದ್ದಾರೆ. ನನಗೆ ಜೀವ ಬೆದರಿಕೆ ಇದೆ. ಇದು ರಾಜಕೀಯ ದ್ವೇಷ. ನಾನು ಯಾರಿಗೂ ಜಗ್ಗಲ್ಲ, ಬಗ್ಗಲ್ಲ. ಬಿಜೆಪಿ ಟಿಕೆಟ್ ಘೋಷಿಸುವವರೆಗೂ ನಾನೇ ಅಭ್ಯರ್ಥಿ ಎಂದುಕೊಂಡಿದ್ದೇನೆ ಎಂದರು.
ಹೈಕಮಾಂಡ್ ಯಾರಿಗೆ ಟಿಕೆಟ್ ಕೊಡುತ್ತೆ ಎಂಬುದು ಚುನಾವಣಾ ಸಮಯದಲ್ಲಿ ಗೊತ್ತಾಗುತ್ತದೆ. ಅಲ್ಲಿಯವರೆಗೆ ನಾನೇ ಅಭ್ಯರ್ಥಿ ಎಂದುಕೊಂಡಿದ್ದೇನೆ. ನಮ್ಮ ಕುಟುಂಬಕ್ಕೆ ಏಳು ಬಾರಿ ಬಿಜೆಪಿ ಟಿಕೆಟ್ ನೀಡಿದೆ. ಹಾಗಾಗಿ, ಬೇರೆ ಪಕ್ಷಕ್ಕೆ ಹೋಗುವ ಆಲೋಚನೆ ಇಲ್ಲ. ನನ್ನ ಪುತ್ರನನ್ನು ಕಾಂಗ್ರೆಸ್‍ಗೆ ಕರೆದರು. ಯಾಕೆ ಈ ವಯಸ್ಸಿನಲ್ಲಿ ಬೇರೆ ಪಕ್ಷಕ್ಕೆ ಹೋಗಬೇಕು. ಯಾವುದೇ ಕಾರಣಕ್ಕೂ ಹೋಗುವುದಿಲ್ಲ. ನನ್ನ ಉಸಿರು ಇರುವವರೆಗೂ ಬಿಜೆಪಿಯಲ್ಲೇ ಇರುತ್ತೇನೆ ಎಂದು ತಿಳಿಸಿದರು.
ಒಂದು ವೇಳೆ ಬಿಜೆಪಿ ಬೇರೆಯವರೆಗೆ ದಾವಣಗೆರೆ ಲೋಕಸಭೆ ಕ್ಷೇತ್ರದ ಅಭ್ಯರ್ಥಿಯಾಗಿ ಟಿಕೆಟ್ ನೀಡಿದರೆ ತನು, ಮನ, ಧನದೊಂದಿಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ರಾಜಕೀಯ ದ್ವೇಷದಿಂದ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಯಾರೂ ನಂಬಲು ಹೋಗಬೇಡಿ. ನಾನು ಸೇವೆ ಮಾಡಲು ಅಷ್ಟೇ ಬಂದಿರುವುದು. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಆರೋಪ, ಆಪಾದನೆಗಳಿಗೆ ಕಿವಿಗೊಡಬೇಡಿ. ಸುಳ್ಳು ಸುದ್ದಿಗೆ ಬೆಲೆ ಕೊಡಬೇಡಿ. ಕಾಂಗ್ರೆಸ್ ನವರು ನನ್ನ ಮೇಲೆ ಐಟಿ ದಾಳಿ ಮಾಡಬೇಕೆಂಬ ಆಗ್ರಹ ಮಾಡುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ನಾನು ನಿರಪರಾಧಿ. ಈ ಹಿಂದೆಯೇ ದಾಳಿ ಆಗಿದೆ. ನನ್ನ ಬಳಿ ಏನೂ ಸಿಕ್ಕಿಲ್ಲ. ನಾನು ಪಾರದರ್ಶಕವಾಗಿದ್ದೇನೆ ಎಂದು ಹೇಳಿದರು.
ಶೇಕಡಾ 40ರಷ್ಟು ಕಮೀಷನ್ ಪಡೆದಿದ್ದೇನೆ ಎಂಬ ಆರೋಪ ಮಾಡಿದರು. ಇದೆಲ್ಲಾ ಶುದ್ಧ ಸುಳ್ಳು. ಈಗ ಬೇರೆಯದ್ದೇ ಆಪಾದನೆ ಮಾಡುತ್ತಿದ್ದಾರೆ. ಇದೆಲ್ಲಾ ಸುಳ್ಳು. ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ನಾನು ತಪ್ಪು ಮಾಡಿದ್ದರೆ ಹೆದರಬೇಕು. ಇಲ್ಲದಿದ್ದರೆ ಭಯ ನನಗ್ಯಾಕೆ ಎಂದು ಹೇಳಿದರು.