ದಾವಣಗೆರೆ| ಡ್ರಾಪ್ ಕೇಳುವ ನೆಪದಲ್ಲಿ ವಿದ್ಯಾರ್ಥಿಗಳಿಬ್ಬರನ್ನು ಕರೆದೊಯ್ದು ಸುಲಿಗೆ: ಆರೋಪಿ ಬಂಧನ
ದಾವಣಗೆರೆ: ಡ್ರಾಪ್ ಕೇಳುವ ನೆಪದಲ್ಲಿ ವಿದ್ಯಾರ್ಥಿಗಳಿಬ್ಬರನ್ನು ಕರೆದೊಯ್ದು ಸುಲಿಗೆ ಮಾಡಿದ್ದ ಆರೋಪಿಯನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತನಿಂದ 1.35 ಲಕ್ಷ ರೂ. ವೌಲ್ಯದ ಸ್ವತ್ತು ವಶ ಪಡಿಸಿಕೊಂಡಿದ್ದಾರೆ.
ಆಜಾದ್ ನಗರ ನಿವಾಸಿ ಆಲಿ ಹಸನ್ (20) ಬಂಧಿತ ಆರೋಪಿ ಎಂದು ತಿಳಿದು ಬಂದಿದೆ.
ಜ.4ರಂದು ಜಿಎಂಐಟಿ ಕಾಲೇಜಿನ ವಿದ್ಯಾರ್ಥಿಗಳಾದ ಎಸ್. ಹರ್ಷಿತ್, ಸ್ಟಿಫನ್ ಕಾಲೇಜು ಮುಗಿಸಿಕೊಂಡು, ಮನೆಗೆ ಮರಳುತ್ತಿದ್ದ ವೇಳೆ ಕಾಲೇಜಿನ ಗೇಟ್ ಬಳಿ ಇದ್ದ ಅದೇ ಕಾಲೇಜಿನ ಹಿರಿಯ ವಿದ್ಯಾರ್ಥಿ ಅಲಿ ಎಂಬಾತ ಇವರ ಬಳಿ ಡ್ರಾಪ್ ಕೇಳಿಕೊಂಡು, ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಬೈಕ್ ನಿಲ್ಲಿಸುವಂತೆ ಹೇಳಿದ್ದಾನೆ.
ಹರ್ಷಿತ್ ಬೈಕ್ ನಿಲ್ಲಿಸುತ್ತಿದ್ದಂತೆ ಮಚಾಕು ತೋರಿಸಿ ದುಡ್ಡು ಕೇಳಿದ್ದಾನೆ. ತಮ್ಮ ಬಳಿ ಹಣ ಇಲ್ಲ ಎಂದಾಗ ಸ್ಟೀಫನ್ ಬಳಿಯಲ್ಲಿದ್ದ ಮೊಬೈಲ್ ಕಿತ್ತುಕೊಂಡು, ಹರ್ಷಿತ್ ಕೊರಳಿನಲ್ಲಿದ್ದ ಚಿನ್ನದ ಚೈನ್ ಕಿತ್ತುಕೊಂಡು ಇವರಿಂದಲೇ ಡ್ರಾಪ್ ಪಡೆದು ಪರಾರಿಯಾಗಿದ್ದ ಎನ್ನಲಾಗಿದೆ.
ಈ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಡಿವೈಎಸ್‌ಪಿ ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನದಲ್ಲಿ ಕಾರ್ಯಪ್ರವೃತ್ತವಾದ ಸಿಪಿಐ ಪ್ರಭಾವತಿ ಸಿ. ಶ್ವೇತಸನದಿ ನೇತೃತ್ವದ ತಂಡ ಆರೋಪಿಯನ್ನು ಪತ್ತೆ ಹಚ್ಚಿ ಮಾಡಿದ್ದಾರೆ. ದರೋಡೆ ಮಾಡಿದ್ದ 55 ಸಾವಿರ ರೂ.ವೌಲ್ಯದ ಚಿನ್ನದ ಚೈನ್ ವಶಕ್ಕೆ ಪಡೆದಿದ್ದು, ತಂಡದ ಕಾರ್ಯವನ್ನು ಎಸ್ಪಿ ಉಮಾ ಪ್ರಶಾಂತ್, ಎಎಸ್ಪಿಗಳಾದ ವಿಜಯಕುಮಾರ್.ಎಂ.ಸಂತೋಷ್, ಜಿ. ಮಂಜುನಾಥ ಶ್ಲಾಘಿಸಿದ್ದಾರೆ.