ದಾವಣಗೆರೆ | ಹೊಸ ಕುಂದುವಾಡದಲ್ಲಿ ಒಂದೇ ದಿನ ಮಗು ಸಹಿತ 7 ಮಂದಿ ಮೃತ್ಯು
ಹೊಸ ಕುಂದುವಾಡ ಗ್ರಾಮಕ್ಕೆ ತಹಶೀಲ್ದಾರ್ ಅಶ್ವಥ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದಾವಣಗೆರೆ, ಜು.11: ತಾಲೂಕಿನ ಹೊಸ ಕುಂದುವಾಡ ಗ್ರಾಮದಲ್ಲಿ ಗುರುವಾರ ಒಂದೇ ದಿನ ಪ್ರತ್ಯೇಕವಾಗಿ ಒಟ್ಟು ಏಳು ಮಂದಿ ಮೃತಪಟ್ಟಿರುವ ಘಟನೆ ನಡೆದಿದೆ.
ನಾಲ್ಕು ಜನ ವಯೋಸಹಜದಿಂದ ಮೃತಪಟ್ಟಿದ್ದರೆ, ಉಳಿದ ಮೂವರು ಅನಾರೋಗ್ಯದ ಕಾರಣ ಸಾವನ್ನಪ್ಪಿದ್ದಾರೆ. ಮಾರಿಯಕ್ಕ (70), ಸಂತೋಷ (30), ಈರಮ್ಮ (60), ಸುನಿಲ್ (25), ಶಾಂತಮ್ಮ (65), ಭೀಮಕ್ಕ (70), ಎರಡು ದಿನದ ನವಜಾತ ಶಿಶು ಸೇರಿದಂತೆ ಒಟ್ಟು ಏಳು ಮಂದಿ ಜನ ಮೃತಪಟ್ಟಿದ್ದಾರೆ.
ಗ್ರಾಮಕ್ಕೆ ತಹಶೀಲ್ದಾರ್ ಅಶ್ವಥ್ ಭೇಟಿ ನೀಡಿ ಈ ಕುರಿತು ಪರಿಶೀಲನೆ ನಡೆಸಿದ್ದಾರೆ.
ಒಂದು ಕಡೆ ಸಾವುಗಳು ಸಂಭವಿಸಿದ್ದರೆ ಇನ್ನೊಂದು ಕಡೆ ಅಂತ್ಯಕ್ರಿಯೆಗಾಗಿ ಸ್ಥಳಾವಕಾಶದ ಕೊರತೆ ಕಾರಣ ಗ್ರಾಮಸ್ಥರು ಪರದಾಡಿದರು. ನಡೆಸಿ ಈ ವಿಚಾರವಾಗಿ ಪ್ರತಿಭಟನೆ ಕೂಡಾ ನಡೆಸಿದರು.
500 ಮನೆಗಳಿರುವ ಹೊಸ ಕುಂದುವಾಡ ಗ್ರಾಮಸ್ಥರು ಪಕ್ಕದ ಹಳೇ ಕುಂದುವಾಡ ಗ್ರಾಮದಲ್ಲಿ ಅಂತ್ಯಕ್ರಿಯೆ ಮಾಡುತ್ತಿದ್ದರು. ಅದರೆ, ಇತ್ತೀಚೆಗೆ ಎರಡು ಗ್ರಾಮಗಳ ನಡುವೆ ಹಬ್ಬದ ವಿಚಾರವಾಗಿ ಮನಸ್ಥಾಪ ಉಂಟಾದ ಕಾರಣದಿಂದ, ಅಂತ್ಯಕ್ರಿಯೆಗೆ ಈಗ ಹಳೇ ಕುಂದುವಾಡ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ನಿಮ್ಮ ಗ್ರಾಮದಲ್ಲಿ ಅಂತ್ಯಕ್ರಿಯೆ ಮಾಡಿಕೊಳ್ಳಿ ಎಂದು ಹೇಳಿದ್ದಾರೆ.
ಇದರಿಂದ ಹೊಸ ಕುಂದುವಾಡ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಸ್ಥಳಕ್ಕೆ ಜಿಲ್ಲಾಧಿಕಾರಿ ಬಂದು ಸಮಸ್ಯೆಯನ್ನು ಇತ್ಯರ್ಥ ಮಾಡಿಕೊಡಬೇಕು ಮತ್ತು ಗ್ರಾಮಕ್ಕೆ ಸ್ಮಶಾನವನ್ನು ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.