ದಾವಣಗೆರೆ | ಕಾರು ಅಪಘಾತ: ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಸಹಿತ ಮೂವರಿಗೆ ಗಂಭೀರ ಗಾಯ
ದಾವಣಗೆರೆ, ಜೂ.19: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ನಗರದ ನಿಜಲಿಂಗಪ್ಪ ಬಡಾವಣೆಯ ರಿಂಗ್ ರಸ್ತೆಯ ಗಡಿಯಾರ ಕಂಬದ ವೃತ್ತಕ್ಕೆ ಢಿಕ್ಕಿ ಹೊಡೆದ ಘಟನೆ ಇಂದು ಬೆಳಗ್ಗೆ 7:30ರ ಸುಮಾರಿಗೆ ನಡೆದಿದೆ. ಘಟನೆಯಲ್ಲಿ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಮಣಿಕಂಠ ಸಹಿತ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆ ವಿವರ: ಇಂದು ಬೆಳಗ್ಗೆ 7:30ರ ಸುಮಾರಿಗೆ ಅಪಘಾತ ಸಂಭವಿಸಿದೆ. ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಮಣಿಕಂಠ ಜಿಮ್ ಕಸರತ್ತು ಮುಗಿಸಿಕೊಂಡು ಕಾರಿನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ರಿಂಗ್ ರಸ್ತೆಯ ಗಡಿಯಾರ ಕಂಬದ ವೃತ್ತಕ್ಕೆ ಢಿಕ್ಕಿ ಹೊಡೆದಿದೆ. ಅತೀ ವೇಗದಲ್ಲಿದ್ದ ಕಾರು ವೃತ್ತಕ್ಕೆ ಢಿಕ್ಕಿ ಹೊಡೆಯುವ ಮೊದಲು ತಿರುವಿನಲ್ಲಿ ಬರುತ್ತಿದ್ದ ಎರಡು ಬೈಕ್ ಗಳಿಗೂ ಢಿಕ್ಕಿಯಾಗಿದೆ. ಇದರಿಂದ ಓರ್ವ ಬೈಕ್ ಸವಾರ, ಕಾರು ಚಾಲಕ ಹಾಗೂ ಮಣಿಕಂಠ ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಪಘಾತದ ದೃಶ್ಯಾವಳಿಗಳು ಸ್ಥಳೀಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅತೀ ವೇಗದಲ್ಲಿ ಬಂದ ಕಾರು ವೃತ್ತಕ್ಕೆ ರಭಸವಾಗಿ ಢಿಕ್ಕಿ ಹೊಡೆದು ರಸ್ತೆಯ ಇನ್ನೊಂದು ಮಗ್ಗುಲಿನಲ್ಲಿರುವ 60 ಅಡಿ ದೂರದ ಯಶ್ ಸರ್ವೀಸ್ ಸ್ಟೇಷನ್ ಬಳಿ ತಿರುಗಿ ನಿಂತಿತ್ತು. ಢಿಕ್ಕಿಯ ತೀವ್ರತೆಗೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅದರ ಬಿಡಿಭಾಗಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ಬೈಕ್ ಕೂಡಾ ಸಂಪೂರ್ಣ ಜಖಂಗೊಂಡಿದೆ.
ಮಾನವೀಯತೆ ಮೇರೆದ ಶಾಸಕ
ಅಪಘಾತ ನಡೆದ ವೇಳೆ ಗಡಿಯಾರ ಕಂಬದ ವೃತ್ತದ ಸಮೀಪದಲ್ಲಿರುವ ಪಾರ್ಕ್ ನಲ್ಲಿ ವಾಯು ವಿಹಾರದಲ್ಲಿದ್ದ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಕೂಡಲೇ ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಗಾಯಾಳುಗಳನ್ನು ಸಾರ್ವಜನಿಕರ ಸಹಕಾರದೊಂದಿಗೆ ಆಸ್ಪತ್ರೆಗಳಿಗೆ ಸಾಗಿಸಿ ಮಾನವೀಯತೆ ಮೇರೆದಿದ್ದಾರೆ.