ಕನ್ನಡ ಭಾಷೆಗಿರುವ ಸವಾಲನ್ನು ಮೆಟ್ಟಿ ನಿಲ್ಲಬೇಕಿದೆ : ಡಾ.ಬರಗೂರು ರಾಮಚಂದ್ರಪ್ಪ
ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ
ಜಗಳೂರು: ಕನ್ನಡ ಯಾವುದೇ ಕಾರಣಕ್ಕೂ ಸಾಯುವುದಿಲ್ಲ. ಆದರೆ, ಅನೇಕ ಸವಾಲುಗಳಿವೆ ಎಂದು ಖ್ಯಾತ ಸಾಹಿತಿ ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಬಯಲು ರಂಗಮಂದಿರದಲ್ಲಿ ರವಿವಾರ ನಡೆದ 14ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಭಾರತಕ್ಕೆ ಸಂವಿಧಾನದ ಪ್ರಕಾರವಾಗಿ ಯಾವುದೇ ರಾಷ್ಟ್ರೀಯ ಭಾಷೆ ಇಲ್ಲ. ಕೆಲವರು ದೇಶದಲ್ಲಿ ಹಿಂದಿ, ಇಂಗ್ಲಿಷ್ ಹೀಗೆ ಇನ್ಯಾವುದೋ ಭಾಷೆಗಳನ್ನು ರಾಷ್ಟ್ರೀಯ ಭಾಷೆ ಎಂದು ಹೇಳಿಕೊಂಡು ಬರುತ್ತಿದ್ದಾರೆ. ಇಂತಹ ಚಿಂತನೆಗಳಿಂದ ಕನ್ನಡ ಸಾಯುವುದಿಲ್ಲ. ಹೀಗೆ ಕನ್ನಡ ಭಾಷೆಗೆ ಅನೇಕ ಸವಾಲುಗಳಿದ್ದು, ಅವುಗಳನ್ನು ಮೆಟ್ಟಿ ನಿಲ್ಲುವ ದಾರಿಗಳನ್ನು ಕನ್ನಡ ಬಳಸುವ ಜನಸಾಮಾನ್ಯರು ಕಂಡುಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ರಾಜ್ಯದಲ್ಲಿ ಕನ್ನಡದ ನಾಮಫಲಕಗಳ ಕುರಿತು ಚರ್ಚೆಯಾಗುವುದು ಒಳ್ಳೆಯದೇ. ಆದರೆ, ಕನ್ನಡ ಬರೀ ನಾಮಫಲಕಗಳಿಗೆ ಸೀಮಿತವಾಗದೆ, ನಾಮಫಲಕಗಳಿಂದ ಬದುಕಿಗೆ ಕನ್ನಡ ಬರುವಂತೆ ಚರ್ಚೆಯಾಗಬೇಕು. ಪ್ರಸಕ್ತ ಭಾಷೆಗಳ ಮುಖಾಂತರ ಜನರನ್ನು ಗುರುತಿಸುವುದನ್ನು ನೋಡುತ್ತಿದ್ದೇವೆ. ಜನರ ಮುಖಾಂತರ ಭಾಷೆಗಳನ್ನು ಗುರುತಿಸುವಂತಾಗಬೇಕು. ಆಗ ಮಾತ್ರ ಭಾಷೆ ಉಳಿಯುವುದಕ್ಕೆ ಸಾಧ್ಯ ಎಂದು ನುಡಿದರು.
ಕನ್ನಡ ನಾಡಿನಲ್ಲಿ ಕನ್ನಡ ಭಾಷಾಭಿಮಾನದ ಕುರಿತು ಸರಕಾರದ ಮಟ್ಟದಲ್ಲಿ ಮರು ಚಿಂತನೆಯಾಗಬೇಕಿದೆ. ಕನ್ನಡ ಕಲಿಯದವನಿಗೆ ಉದ್ಯೋಗವಿಲ್ಲ, ಕನ್ನಡ ಮಾತನಾಡದವನಿಗೆ ಯಾವುದೇ ಸೌಲಭ್ಯಗಳನ್ನು ರಾಜ್ಯದಲ್ಲಿ ನೀಡುವುದಿಲ್ಲ ಎಂಬ ವಾತಾವರಣವನ್ನು ನಿರ್ಮಾಣ ಮಾಡಬೇಕಿದೆ ಎಂದು ಬರಗೂರು ಸಲಹೆ ನೀಡಿದರು.
ಜಗಳೂರು ಶಾಸಕ ದೇವೇಂದ್ರಪ್ಪ, ಮಾಯಕೊಂಡ ಶಾಸಕ ಬಸವಂತಪ್ಪ, ಮಾಜಿ ಶಾಸಕ ಗುರುಸಿದ್ದನಗೌಡ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಂಜುನಾಥ್, ರಾಘವೇಂದ್ರ ನಾಯರಿ, ಜಗದೀಶ್ ಕೂಲಂಬಿ, ಕಸಾಪ ಜಿಲ್ಲಾ ಅಧ್ಯಕ್ಷ ವಾಮದೇವಪ್ಪ, ತಾಲೂಕು ಅಧ್ಯಕ್ಷೆ ಸುಜಾತಾ, ಕಾರ್ಯದರ್ಶಿ ಗೀತಾ ಮಂಜಣ್ಣ, ಹಿರಿಯ ವರದಿಗಾರ ಶ್ರೀನಿವಾಸ್, ಬಸವರಾಜ್, ಎಸ್.ಜೆ.ಶ್ರೀಧರ್ ಹಾಗೂ ಇತರರು ಉಪಸ್ಥಿತರಿದ್ದರು.
ಅಕ್ಷರ ಜಾತ್ರೆ ಎರಡು ದಿನಗಳ ಕಾಲ ಸಾಂಸ್ಕೃತಿಕ ಸುಗ್ಗಿಯಂತಾಗಿದೆ. ಜಗಳೂರಿನ ಕೆರೆಗಳು ಕೋಡಿ ಬಿದ್ದಿವೆ. ಬುಡಕಟ್ಟು ಸಂಸ್ಕೃತಿ ಗರ್ಭದಲ್ಲಿಟ್ಟುಕೊಂಡಿರುವ ಬರದ ನಾಡು ಬರಡಲ್ಲ. ಕೋಮುವಾದದ ನಂಜು ಬಿತ್ತದಂತೆ ಸಾಂಸ್ಕೃತಿಕ ಮೌಲ್ಯ ಸಾರುವ, ಕನ್ನಡದ ಅಸ್ಮಿತೆ ಉಳಿಸೋಣ. ಈ ಸಮ್ಮೇಳನ ನನ್ನ ಸ್ಮೃತಿಪಟಲದಲ್ಲಿ ಜೀವನವಿಡೀ ಅಚ್ಚಳಿಯದೆ ಉಳಿಯಲಿದೆ. ಜನಭಾಷೆ ಆಡಳಿತಕ್ಕಾಗಿ ಬರಬೇಕು. ತಾರತಮ್ಯ ಕೊನೆಯಾಗಿ ಸಮಾನತೆಗೆ ಸಾಕ್ಷಿಯಾಗಬೇಕು. ಪ್ರಜ್ಞಾವಂತರೇ ಮೌಢ್ಯ ಬಿತ್ತಲು ಹೊರಟಿರುವುದು ಆತಂಕಕಾರಿ ಬೆಳವಣಿಗೆ. ದುಡಿಯದೆ ಸಂಭ್ರಮಿಸುವ ಸುಳ್ಳಿನ ವರ್ಗದ ಮಧ್ಯೆ ಬಹುಜನರು ಹಸಿವಿನಿಂದ ಬಳಲುತ್ತಿದ್ದಾರೆ.
-ಡಾ.ಎ.ಬಿ.ರಾಮಚಂದ್ರಪ್ಪ, ಸಮ್ಮೇಳನದ ಸರ್ವಾಧ್ಯಕ್ಷರು
ಸಮ್ಮೇಳನದಲ್ಲಿ ಮಂಡಿಸಿದ ನಿರ್ಣಯಗಳು :
1.ದಾವಣಗೆರೆಯಲ್ಲಿ 3ನೇ ವಿಶ್ವ ಕನ್ನಡ ಸಮ್ಮೇಳನವನ್ನು ಆಯೋಜಿಸಬೇಕು, ಕೂಡಲೇ ಸರಕಾರ ದಿನವನ್ನು ಘೋಷಣೆ ಮಾಡಬೇಕು.
2.ಭೌಗೋಳಿಕವಾಗಿ ರಾಜ್ಯದ ಮಧ್ಯೆ ಭಾಗದಲ್ಲಿರುವ ದಾವಣಗೆರೆ ನಗರವನ್ನು ರಾಜ್ಯದ ಎರಡನೇ ರಾಜಧಾನಿ ಮಾಡಬೇಕು.
3.ಕನ್ನಡ ಮಾಧ್ಯಮದಲ್ಲಿ ವಿಧ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳಿಗೆ ಈಗ ನೀಡುತ್ತೀರುವ 5 ಮೀಸಲಾತಿಯನ್ನು 15ಕ್ಕೆ ಏರಿಸುವ ಮೂಲಕ ಕನ್ನಡವನ್ನು ಅನ್ನದ ಭಾಷೆಯನ್ನಾಗಿಸಬೇಕು.
4.ಜಿಲ್ಲೆಯಲ್ಲಿ ಕೃಷಿ ಉತ್ಪನ ಆಧಾರಿತ ಹಾಗೂ ಉದ್ಯೋಗ ಸೃಷ್ಟಿಸುವ ಕೈಗಾರಿಕೆಗಳನ್ನು ಸ್ಥಾಪನೆಗಳು ಹೆಚ್ಚಾಗಬೇಕು
5. ಜಗಳೂರು ತಾಲೂಕಿನ ಎಲ್ಲಾ ಪ್ರವಾಸೋಧ್ಯಮ ಸ್ಥಳಗಳನ್ನು ಅಭಿವೃದ್ಧಿಪಡಿಸಿ ಹೆಚ್ಚೆಚು ಪ್ರವಾಸಿಗರು ಭೇಟಿ ನೀಡಲು ಅನುಕೂಲವಾಗುವಂತೆ ಗುಣಮಟ್ಟ ಸಾರಿಗೆ, ರಸ್ತೆ, ವಸತಿ ಮೊದಲಾದ ಮೂಲ ಸೌಕರ್ಯ ಸೌಲಭ್ಯವನ್ನು ಒದಗಿಸಬೇಕು.
6. ಜಗಳೂರು ಸಿಮೇಯಲ್ಲಿ ವಾಸಿಸುತ್ತಿರುವ ಕೊಂಡುಕುರಿ ಸಂರಕ್ಷೆಣೆಗೆ ಸರಕಾರ ಆಗತ್ಯ ಕ್ರಮಗಳನ್ನು ಅನುಸರಿಸಿ ಸರಕಾರಿ ಕಾರ್ಯಕ್ರಮಗಳಲ್ಲಿ ಕೊಂಡುಕುರಿಯ ಲಾಂಛನವನ್ನು ಕಡ್ಡಾಯವಾಗಿ ಬಳಸಲು ಸರಕಾರ ಆದೇಶ ಮಾಡಬೇಕು.
7.ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸುಸಜ್ಜಿತ ಕನ್ನಡ ಭವನ ನಿರ್ಮಿಸಲು ಅಗತ್ಯ ಸಹಕಾರ, ಅನುದಾನ ನೀಡಬೇಕು.
8.ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸುವ ಎಲ್ಲಾ ಹಂತದ ಸಮ್ಮೇಳನಗಳಲ್ಲಿ ಕೈಗೊಳ್ಳುವ ನಿರ್ಣಯಗಳನ್ನು ಅನುಷ್ಠಾನಕ್ಕೆ ಸರ್ಕಾರ ಮುಂದಾಗಬೇಕು.