ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ : ಬಿಜೆಪಿ ಅತೃಪ್ತ ನಾಯಕರ ಬಣಕ್ಕೆ ರೇಣುಕಾಚಾರ್ಯ ತಿರುಗೇಟು
ದಾವಣಗೆರೆ : "ಯಾರೋ ಮೂರ್ನಾಲ್ಕು ಮಂದಿ ಹೇಳಿದಾಕ್ಷಣ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿ.ವೈ.ವಿಜಯೇಂದ್ರ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ" ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು ಬಿಜೆಪಿ ಅತೃಪ್ತ ನಾಯಕರ ಬಣಕ್ಕೆ ತಿರುಗೇಟು ನೀಡಿದ್ದಾರೆ.
ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ವಿಜಯೇಂದ್ರ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಲ್ಲ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ವಿಜಯೇಂದ್ರ ಅವರನ್ನು ಅಧ್ಯಕ್ಷರನ್ನಾಗಿ ಮಾಡಿಲ್ಲ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾ ಅವರು ನೇಮಿಸಿರುವುದು. ವಿರೋಧ ವ್ಯಕ್ತಪಡಿಸಿದರೆ ಕೇಂದ್ರದ ನಾಯಕರಿಗೆ ಅಪಮಾನ ಮಾಡಿದಂತೆ" ಎಂದು ಹೇಳಿದರು.
ಬಸನಗೌಡ ಪಾಟೀಲ್ ಯತ್ನಾಳ್‍ರನ್ನು ರಾಜ್ಯಾಧ್ಯಕ್ಷರನ್ನಾಗಿ ವರಿಷ್ಠರು ನೇಮಕ ಮಾಡಿದ್ದರೆ ನಾವೆಲ್ಲರೂ ಒಪ್ಪಿಕೊಳ್ಳುತ್ತಿದ್ದೆವು. ಎಲ್ಲರ ಅಭಿಪ್ರಾಯ ಸಂಗ್ರಹಿಸಿಯೇ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿರುವುದು. ಯಾರೋ ನಾಲ್ಕು ಮಂದಿ ಹೇಳಿದಾಕ್ಷಣ ಬದಲಾಯಿಸಲು ಆಗುತ್ತದೆಯೇ?. ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಮಹಾನಗರ ಪಾಲಿಕೆ, ವಿಧಾನಸಭೆ ಚುನಾವಣೆ ವಿಜಯೇಂದ್ರ ನೇತೃತ್ವದಲ್ಲಿ ಎದುರಿಸಿ ಭರ್ಜರಿ ಜಯಭೇರಿ ಬಾರಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿಜಯೇಂದ್ರ ಅವರೇ ರಾಜ್ಯಾಧ್ಯಕ್ಷರಾಗಿ ಮುಂದುವರಿಯಬೇಕು ಎಂದು ನಾವು ಸಹ ದಿಲ್ಲಿಗೆ ನಿಯೋಗ ಕರೆದುಕೊಂಡು ಹೋಗುತ್ತೇವೆ. ವಿಜಯೇಂದ್ರ ಜನಪ್ರಿಯತೆ, ಸಂಘಟನೆ, ಸಾಮರ್ಥ್ಯ ನೋಡಿ ಸಹಿಸಿಕೊಳ್ಳಲು ಆಗದೇ ಇರುವವರು ಈ ರೀತಿ ಮಾತನಾಡುತ್ತಿದ್ದಾರೆ. ಮುಡಾ ಪ್ರಕರಣ ಸಂಬಂಧ ಸಿಎಂ ರಾಜೀನಾಮೆಗೆ ಆಗ್ರಹಿಸಿ ಬೆಂಗಳೂರಿನಿಂದ ಮೈಸೂರಿನವರೆಗೆ ಹಮ್ಮಿಕೊಂಡಿದ್ದ ಪಾದಯಾತ್ರೆ ಯಶಸ್ವಿಯಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ರಾಜು, ಜಯರುದ್ರೇಶ್, ಪ್ರವೀಣ್ ಜಾಧವ್, ಶ್ರೀನಿವಾಸ್, ಮಣಿಕಂಠ ಇತರರು ಇದ್ದರು.