ಧರ್ಮಾಧಾರಿತವಾಗಿ ಜಾರಿಗೊಳಿಸುತ್ತಿರುವ ʼಸಿಎಎ ಕಾಯ್ದೆʼ ಅಪಾಯಕಾರಿ : ಹಂಸಲೇಖ
ಹರಿಹರ : ಪೌರತ್ವ (ತಿದ್ದುಪಡಿ) ಕಾಯ್ದೆಯು ತಾರತಮ್ಯದಿಂದ ಕೂಡಿದ್ದು, ಧರ್ಮಾಧಾರಿತವಾಗಿ ಜಾರಿಗೊಳಿಸುತ್ತಿರುವ ಈ ಕಾಯ್ದೆ ಅಪಾಯಕಾರಿಯಾಗಿದೆ. ಸರಿಯಾದ ದಾಖಲೆ ಇಲ್ಲದ ಭಾರತೀಯರನ್ನು ಕ್ರಮೇಣ ಹೊರಗಟ್ಟುವ ಹುನ್ನಾರ ಇದರಲ್ಲಿ ಅಡಗಿದೆ ಎಂದು ಸಂಗೀತ ನಿರ್ದೇಶಕ, ಸಾಹಿತ್ಯ ರಚನಾಕಾರ ಹಂಸಲೇಖ ಆತಂಕ ವ್ಯಕ್ತಪಡಿಸಿದರು.
ನಗರದ ಹೊರವಲಯದ ಮೈತ್ರಿವನದಲ್ಲಿ ಪ್ರೊ.ಬಿ.ಕೃಷ್ಣಪ್ಪ ಟ್ರಸ್ಟ್, ಮಾನವ ಬಂಧುತ್ವ ವೇದಿಕೆ, ಸಿವಿಜಿ ಬಾಣಗೆರೆ, ಏಕಾಂತಗಿರಿ ಟ್ರಸ್ಟ್ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಆಯೋಜಿಸಿದ್ದ ಪ್ರೊ.ಬಿ.ಕೃಷ್ಣಪ್ಪ, ಡಾ.ಬಿ.ಆರ್.ಅಂಬೇಡ್ಕರ್‌ರವರ ಜನ್ಮ ದಿನ ಮತ್ತು ವಿಶ್ವ ಕಾರ್ಮಿಕ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
"ವಿಮೋಚನೆ, ಸುಧಾರಣೆ, ಕ್ರಾಂತಿಕಾರಕ ಮತ್ತು ಪರ್ಯಾಯ ಎಂಬ ಅಂಶಗಳತ್ತ ನಮ್ಮ ಚಿತ್ತ ಹರಿಸಬೇಕಿದೆ. ಪ್ರಜಾತಂತ್ರವನ್ನು 12ನೇ ಶತಮಾನದಲ್ಲಿಯೇ ನಮಗೆ ತಿಳಿಸಿದ ಬಸವಣ್ಣನ ನಾಡಿನ ಜನತೆಯಾದ ನಾವು ಈ ಬಾರಿ ಈ ನಾಲ್ಕು ಅಂಶಗಳ ಆಧಾರದಲ್ಲಿ ದೇಶದಲ್ಲಿ ಈಗಿರುವ ಜನವಿರೋಧಿ ಆಡಳಿತವನ್ನು ರಕ್ತಕ್ರಾಂತಿ ಇಲ್ಲದೆಯೇ ಬದಲಾಯಿಸಬೇಕಿದೆ" ಎಂದು ಹೇಳಿದರು.
ʼರಕ್ತ ಹೆಪ್ಪುಗಟ್ಟದಿರುವ ಹಿಮೋಫಿಲಿಯಾ ಕಾಯಿಲೆಯು ವ್ಯಕ್ತಿಯೊಬ್ಬನನ್ನು ಸಾವಿನತ್ತ ಸಾಗಿಸಿದಂತೆಯೇ ಮಹಾಪ್ರಭುಗಳ ಆಡಳಿತದಲ್ಲಿ ಜಾರಿಗೆ ಬರುತ್ತಿರುವ ಹೊಸ ಕಾಯ್ದೆ, ಕಾನೂನುಗಳು ದೇಶದ ಶೋಷಿತರು, ಬಡವರ ಅಂತ್ಯಕ್ಕೆ ದಾರಿ ಮಾಡಿಕೊಡುತ್ತಿವೆ ಎಂದು ಕೇಂದ್ರದ ಬಿಜೆಪಿ ಸರ್ಕಾರ ಮತ್ತು ಪ್ರಧಾನಿ ಮೋದಿಯವರ ಹೆಸರು ಪ್ರಸ್ತಾಪಿಸದೆ ಅವರು ಟೀಕಿಸಿದರು.
ಭಾರತೀಯ ಮೇಲ್ವರ್ಗದವರಿಗೆ ಭಗವತ್ಗೀತೆ, ರಾಮಾಯಣ, ಮಹಾಭಾರತವಿದೆ, ಕ್ರೈಸ್ತರಿಗೆ ಬೈಬಲ್, ಮುಸ್ಲಿಮರಿಗೆ ಖುರ್‌ಆನ್, ಸಿಖ್ಖರಿಗೆ ಗುರು ಗ್ರಂಥ ಸಾಹಿಬ್, ಬೌದ್ಧರಿಗೆ ತ್ರಿಪಿಟಿಕಾ, ಜೈನರಿಗೆ ಆಗಮ ಸೂತ್ರಗಳಿವೆ. ಅದೇ ರೀತಿ ಮೇಲ್ವರ್ಗದವರಿಗಾಗಿ ದೇಶದಲ್ಲಿ ಕೋಟ್ಯಾಂತರ ದೇವಸ್ಥಾನಗಳೂ ಇದೆ. ಆದರೆ ದೇಶದ ಶೇ.90 ರಷ್ಟಿರುವ ಶೋಷಿತ, ಹಿಂದುಳಿದ ವರ್ಗದವರ ಅಧ್ಯಾತ್ಮಿಕ ಹಸಿವನ್ನು ನೀಗಿಸುವ ಧರ್ಮಗ್ರಂಥ ಹಾಗೂ ದೇವಸ್ಥಾನಗಳ ಅಗತ್ಯವಿದ್ದು, ಈ ಕುರಿತು ಚಿಂತನೆ ನಡೆಯಬೇಕಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.