ವಕ್ಫ್ ಆಸ್ತಿ | ಪಕ್ಷದ ವರಿಷ್ಠರು ಯತ್ನಾಳ್ರನ್ನು ತಡೆಯದಿದ್ದರೆ ನಾವೂ ಪ್ರತ್ಯೇಕ ಪ್ರವಾಸ ಮಾಡುತ್ತೇವೆ : ರೇಣುಕಾಚಾರ್ಯ
ಎಂ.ಪಿ.ರೇಣುಕಾಚಾರ್ಯ
ದಾವಣಗೆರೆ : "ವಕ್ಫ್ ಆಸ್ತಿ ಕುರಿತು ಪ್ರತ್ಯೇಕ ಸಭೆ ನಡೆಸಿ, ಜನಾಂದೋಲನ ನಡೆಸಲು ಮುಂದಾಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಂಡಕ್ಕೆ ಪಕ್ಷದ ವರಿಷ್ಠರು ಕಡಿವಾಣ ಹಾಕದಿದ್ದರೆ, ನಾವೂ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಪಡೆದು ಪ್ರವಾಸ ನಡೆಸಬೇಕಾಗುತ್ತದೆ" ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಎಚ್ಚರಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಪಹಣಿಯಲ್ಲಿ ವಕ್ಫ್ ಎಂದು ನಮೂದಾಗಿರುವ ವಿರುದ್ಧ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮೂರು ತಂಡ ರಚಿಸಿ, ವಕ್ಫ್ ವಿಷಯದಲ್ಲಿ ರಾಜ್ಯ ಸರಕಾರಕ್ಕೆ ಚಾಟಿ ಬೀಸಲು ‘ನಮ್ಮ ಭೂಮಿ-ನಮ್ಮ ಹಕ್ಕು’ ಪ್ರವಾಸಕ್ಕೆ ಮುಂದಾಗಿದ್ದಾರೆ. ಈ ಮಧ್ಯೆಯೂ ಯತ್ನಾಳ್ ತಂಡ ಪ್ರತ್ಯೇಕ ಸಭೆ ನಡೆಸಿ ಪ್ರವಾಸ ನಡೆಸಲು ಮುಂದಾಗಿರುವುದು ಸರಿಯಲ್ಲ. ಪಕ್ಷದ ವರಿಷ್ಠರು ಇವರಿಗೆ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ನಾವೂ ಪ್ರತ್ಯೇಕ ಪ್ರವಾಸ ನಡೆಸಬೇಕಾಗುತ್ತದೆ" ಎಂದರು.
"ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಮೇಲೆ ಪಕ್ಷಕ್ಕೆ ಬೂಸ್ಟರ್ ಡೋಸ್ ಸಿಕ್ಕಂತಾಗಿದೆ. ಅಧ್ಯಕ್ಷರ ನಿರ್ಣಯಕ್ಕೆ ಎಲ್ಲರೂ ಬದ್ಧವಾಗಿರಬೇಕು. ಇವರ ವಿರುದ್ಧ ಪರ್ಯಾಯ ನಾಯಕತ್ವ ಹುಟ್ಟು ಹಾಕಲು ಸಾಧ್ಯವೇ ಇಲ್ಲ. ವಿಜಯೇಂದ್ರರ ಬೆಳವಣಿಗೆ ಸಹಿಸಲಾಗದೇ ಹೀಗೆಲ್ಲಾ ಮಾಡುವುದು ಸರಿಯಲ್ಲ" ಎಂದು ಆಕ್ಷೇಪ ವ್ಯಕ್ತಪಡಿಸಿದರು.
"ಮೂರು ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ವಕ್ಫ್ ಸಂಬಂಧ ರೈತರಿಗೆ ನೀಡಿದ್ದ ನೋಟಿಸ್ ವಾಪಸ್ ಪಡೆಯಬೇಕೆಂದು ಹೇಳಿ ನಾಟಕವಾಡಿದರು. ಆದರೆ, ಈಗ ಉಪ ಚುನಾವಣೆಯಲ್ಲಿ ಸೋಲುವ ಮುನ್ಸೂಚನೆ ದೊರೆತಿರುವುದರಿಂದ ಚಿಂತಾಮಣಿ ತಾಲೂಕಿನ ತಿಮ್ಮಸಂದ್ರ ಗ್ರಾಮದಲ್ಲಿ ಪಹಣಿಯಲ್ಲಿ ವಕ್ಪ್ ಎಂದು ನಮೂದಾಗಿರುವ ಜಮೀನು ಉಳುಮೆ ಮಾಡಲು ಮುಂದಾಗಿದ್ದ ರೈತರ ಮೇಲೆ ಲಾಠಿ ಪ್ರಹಾರ ನಡೆಸಿ, ಅವರ ಟ್ರಾಕ್ಟರ್ ಜಪ್ತಿ ಮಾಡಿರುವುದು ಖಂಡನೀಯ" ಎಂದು ಆಕ್ರೋಶ ವ್ಯಕ್ತಪಡಿಸಿದರು.