ವಿಜಯೇಂದ್ರ ಪರ ಬಣದ ಸಭೆ | ಫೆ. 27ಕ್ಕೆ ಯಡಿಯೂರಪ್ಪ ಅದ್ದೂರಿ ಜನ್ಮದಿನಕ್ಕೆ ನಿರ್ಣಯ
ದಾವಣಗೆರೆ : ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಜನ್ಮದಿನವನ್ನು 2025ರ ಫೆಬ್ರವರಿ 25ರಂದು ಆದ್ದೂರಿಯಾಗಿ ಆಚರಿಸಲಾಗುವುದು ಎಂದು ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ತಿಳಿಸಿದರು.
ಇಲ್ಲಿನ ಖಾಸಗಿ ಹೋಟೆಲ್‍ನಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಪರ ಗುರುತಿಸಿಕೊಂಡಿರುವ ಬಣದ ಪ್ರಮುಖ ನಾಯಕರ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮದಲ್ಲಿ 20 ಲಕ್ಷ ಜನ ಸೇರಿಸಲು ನಿರ್ಧರಿಸಿದ್ದು, ಕೇಂದ್ರದ ವರಿಷ್ಠರು, ನಾಡಿನ ಮಠಾಧೀಶರನ್ನು ಆಹ್ವಾನಿಸಲಾಗುವುದು ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ಜೆಡ್ಡಾ ಸೇರಿದಂತೆ ಬಿಜೆಪಿ ನಾಯಕರು, ನಾಡಿನ ಎಲ್ಲಾ ಮಠಾಧೀಶರನ್ನು ಆಹ್ವಾನಿಸಲಾಗುವುದು. ಈ ಕಾರ್ಯಕ್ರಮಕ್ಕೆ ಯಡಿಯೂರಪ್ಪ ಅಭಿಮಾನಿಗಳ ಬಳಗ ಎಂಬ ಹೆಸರು ನಾಮಕರಣ ಮಾಡಿ ಆಯೋಜಿಸಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು.
ಬಿ.ಎಸ್.ಯಡಿಯೂರಪ್ಪ ಬಿಜೆಪಿ ಪಕ್ಷ ಕಟ್ಟಿ ಬೆಳೆಸಿದ ಹಿರಿಯ ನಾಯಕರು. ಅವರ ಮಾರ್ಗದರ್ಶನ ಎಲ್ಲರಿಗೂ ಅವಶ್ಯಕತೆ ಇದೆ. ನಾಡಿನ ಮುಖ್ಯಮಂತ್ರಿಯಾಗಿ ಜನಪ್ರಿಯ ಆಡಳಿತ ನೀಡಿದವರು. ಅವರ ಸಾಧನೆ, ಹೋರಾಟದ ಗುಣ ಸ್ಮರಿಸಲಾಗುವುದು. ಧೀಮಂತ ನಾಯಕರನ್ನು ಗುರುತಿಸುವ, ಗೌರವಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಸಭೆಯಲ್ಲಿ ಮಾಜಿ ಸಚಿವರಾದ ಎಂ.ಪಿ.ರೇಣುಕಾಚಾರ್ಯ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಹರತಾಳು ಹಾಲಪ್ಪ, ಮಹೇಶ್, ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ, ಬ್ಯಾಡಗಿ ವಿರೂಪಾಕ್ಷಪ್ಪ, ಅರುಣ್‍ಕುಮಾರ್, ಗಂಗಾಧರನಾಯ್ಕ್ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು
ಪಕ್ಷ ಸಂಘಟನೆ ದೃಷ್ಠಿಯಿಂದ ಸಭೆ : ಎಂ.ಪಿ.ರೇಣುಕಾಚಾರ್ಯ
ಈ ಸಭೆ ಯಾರ ಪರವಾಗಿಯೂ ಅಲ್ಲ, ಯಾರ ವಿರುದ್ಧವಾಗಿಯೂ ಅಲ್ಲ. ಯಾವ ಬಣದ ಪರ್ಯಾಯ ಸಭೆಯೂ ಅಲ್ಲ. ಇದು ಸ್ನೇಹಿತ ಬಳಗದವರು ಸೇರಿ ನಡೆಸಿದ ಸಭೆಯಾಗಿದೆ. ಪಕ್ಷ ಸಂಘಟನೆ ಮಾಡುವ ದೃಷ್ಟಿಯಿಂದ ನಾವೆಲ್ಲರೂ ಒಂದೆಡೆ ಸೇರಿ ಚರ್ಚೆ ಮಾಡಿದ್ದೇವೆ. ಸುಮಾರು 60ಕ್ಕೂ ಹೆಚ್ಚು ಜನ ಮಾಜಿ ಸಚಿವರು, ಮಾಜಿ ಶಾಸಕರು ದಾವಣಗೆರೆಯಲ್ಲಿ ಸಭೆ ಸೇರಬೇಕೆಂದು ಕಳೆದ ಎರಡು ತಿಂಗಳ ಹಿಂದೆ ಬೆಂಗಳೂರಿನಲ್ಲಿ ನಡೆದಿದ್ದ ಸಭೆಯಲ್ಲಿ ನಿರ್ಧಾರ ಮಾಡಿದ್ದವು. ಅದರಂತೆ ಇಂದು ನಾವು ಇಲ್ಲಿ ಸಭೆ ನಡೆಸಿದ್ದೇವೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.