ಕಲಬುರಗಿ | ಕಾರ್ಮಿಕ ಹೋರಾಟಗಾರ ಅಬ್ದುಲ್ ಕಲೀಮ್ ನಿಧನ

ಅಬ್ದುಲ್ ಕಲೀಮ್
ಕಲಬುರಗಿ : ಕೆಎಸ್ಸಾರ್ಟಿಸಿ ಸ್ಟಾಪ್ ಅಂಡ್ ವರ್ಕರ್ಸ್ ಯೂನಿಯನ್ ಕಲಬುರಗಿ ವಿಭಾಗ -2 ರ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಕಾರ್ಮಿಕ ಹೋರಾಟಗಾರ ಕಾಂ. ಅಬ್ದುಲ್ ಕಲೀಮ್(60) ಅವರು ಹೃದಯಾಘಾತದಿಂದ ಗುರುವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ.
ನಗರದ ಸಂತ್ರಾಸವಾಡಿಯ ಜಿಡಿಎ ಲೇಔಟ್ ನ ನಿವಾಸಿಯಾಗಿರುವ ಅಬ್ದುಲ್ ಕಲೀಮ್ ಅವರು, ಕೆಕೆಎಸ್ಸಾರ್ಟಿಸಿಯಲ್ಲಿ ಸೇವೆಸಲ್ಲಿಸುತ್ತಿದ್ದರು. ಮುಂದಿನ ಮೇ ತಿಂಗಳ ಕೊನೆಯ ವಾರದಲ್ಲಿ ನಿವೃತ್ತಿ ಪಡೆಯಲಿದ್ದರು ಎನ್ನಲಾಗಿದೆ.
ಮೃತರು ಒಬ್ಬ ಮಗ, ಮಗಳು, ಪತ್ನಿ ಯನ್ನು ಅಗಲಿದ್ದಾರೆ.
ಕೆಎಸ್ಸಾರ್ಟಿಸಿಯಲ್ಲಿ ಕಾರ್ಮಿಕ ಸಂಘಟನೆ ಬೆಳೆಸುವ ಮೂಲಕ ಕಾರ್ಮಿಕ ಹಕ್ಕುಗಳ ಸಲುವಾಗಿ ಒಳ್ಳೆಯ ಕಾರ್ಯನಿರ್ವಹಿಸುತ್ತಿದ್ದರು ಮತ್ತು ಯಾವುದೇ ಸಂಘಟನೆ ಜವಾಬ್ದಾರಿ ಕೆಲಸ ಒಪ್ಪಿಸಿದರೆ ಅದನ್ನು ಪ್ರಜ್ಞಾಪೂರ್ವಕ ಪ್ರಮಾಣಿಕವಾಗಿ ಸಂಘಟನೆಯ ಸಿದ್ಧಾಂತದ ಅಡಿಯಲ್ಲಿ ನಿಷ್ಠೆಯಿಂದ ಸಂಘಟನೆ ಕೆಲಸ ಮಾಡುತ್ತಿದ್ದ ಅವರು, ಕಾರ್ಮಿಕರ ಜನನಾಯಕರು ಆಗಿದ್ದರು. ಇವರ ನಿಧನದಿಂದ AITUC ಕಲಬುರಗಿ ಸಮಿತಿ ಹಾಗೂ ಕೆಎಸ್ಸಾರ್ಟಿಸಿ ಯುನಿಯನ್ ಜಿಲ್ಲಾ ಮತ್ತು ರಾಜ್ಯ ಸಮಿತಿಗಳಿಗೆ ತುಂಬಲಾರದ ನಷ್ಟ ಉಂಟು ಮಾಡಿದೆ ಎಂದು AITUC ಜಿಲ್ಲಾ ಮುಖಂಡ ಕಾಂ. ಭೀಮಾಶಂಕರ ಮಾಡಿಯಾಳ ಸಂತಾಪ ವ್ಯಕ್ತಪಡಿಸಿದ್ದಾರೆ.
ಸಂತಾಪ : ಜಿಲ್ಲಾ ಕಾರ್ಮಿಕ ಮುಖಂಡರಾದ ಭೀಮಾಶಂಕರ ಮಾಡಿಯಾಳ, ಪ್ರಭುದೇವ ಯಳಸಂಗಿ, ಹೆಚ್.ಎಸ್. ಪತಕೆ, ಸಿದ್ದಪ್ಪ ಪಾಲಕೆ, ಹನಮಂತರಾಯ ಅಟ್ಟೂರು ಸೇರಿದಂತೆ ರಾಜ್ಯ ಹೋರಾಟಗಾರರು ಸಹ ಸಂತಾಪ ವ್ಯಕ್ತಪಡಿಸಿದ್ದಾರೆ.