ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೆ ಲೋಕಸಭಾ ಟಿಕೆಟ್ ವಿರೋಧಿಸಿ ಸಾಮಾಜಿಕ ಜಾಲತಾಣದಲ್ಲಿ ಪತ್ರ ವೈರಲ್
ಹುಬ್ಬಳ್ಳಿ: ಕೆಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಈ ಬಾರಿ ಧಾರವಾಡ ಕ್ಷೇತ್ರದಿಂದ ಲೋಕಸಭಾ ಟಿಕೆಟ್ ನೀಡಬಾರದು ಎಂಬ ಅಂಶಗಳನ್ನೊಳಗೊಂಡಿರುವ ಪತ್ರವೊಂದು ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಪ್ರಹ್ಲಾದ್ ಜೋಶಿ ಬದಲಿಗೆ ಹೊಸಬರಿಗೆ ಟಿಕೆಟ್ ನೀಡಲು ವೈರಲ್ ಆದ ಪತ್ರದಲ್ಲಿ ಆಗ್ರಹಿಸಲಾಗಿದೆ.
ಈ ಹಿಂದೆಯೂ ಪ್ರಹ್ಲಾದ್ ಜೋಶಿ ಅವರಿಗೆ ಟಿಕೆಟ್ ನೀಡಬಾರದು ಎಂಬ ಕೂಗು ಕೇಳಿ ಬಂದಿತ್ತು. ಅಲ್ಲದೇ ಹೊಸಬರಿಗೆ ನೀಡಬೇಕು ಎಂದು ‘ವೀರಶೈವ ಲಿಂಗಾಯತ’ ಹೆಸರಿನ ಎಕ್ಸ್ ಖಾತೆಯಿಂದ ಪೋಸ್ಟ್ ಮಾಡಲಾಗಿತ್ತು.
ಕ್ಷೇತ್ರದಲ್ಲಿ ಜೋಶಿ ವಿರೋಧಿ ಅಲೆ ಹೆಚ್ಚಾಗಿದೆ ಎನ್ನಲಾಗಿದ್ದು, ಈ ವೇಳೆ ಪತ್ರವೊಂದು ವೈರಲ್ ಆಗಿರುವುದು ಕುತೂಹಲಕ್ಕೆ ಕಾರಣವಾಗಿದೆ.
ವೈರಲ್ ಆದ ಪತ್ರದಲ್ಲೇನಿದೆ?
ಪ್ರಹ್ಲಾದ್ ಜೋಶಿ ಅವರು 1997 ರಲ್ಲಿ ಈದ್ಗಾ ಮೈದಾನದ ಹೋರಾಟದಲ್ಲಿ ಭಾಗವಹಿಸಿದ ಸಹಸ್ರಾರು ಕಾರ್ಯಕರ್ತರಲ್ಲಿ ಇವರು ಒಬ್ಬರು, ಆದರೆ ಆ ಸಂದರ್ಭವನ್ನು ಉಪಯೋಗಿಸಿಕೊಂಡು ತಮ್ಮ ಸ್ವಾರ್ಥ ಲಾಭಕ್ಕಾಗಿ ಬಳಸಿಕೊಂಡು ರಾಜಕೀಯ ನೆಲೆ ಕಂಡುಕೊಂಡ ಒಬ್ಬ ಕುತಂತ್ರ ರಾಜಕಾರಣಿ ಎಂದು ಪತ್ರದಲ್ಲಿ ಹೇಳಲಾಗಿದೆ.
ಅಸಲಿಗೆ ಈದ್ಗಾ ಮೈದಾನದ ವಿವಾದ ಇಲ್ಲದೇ ಇದ್ದರೆ ಇವರಿಗೆ ರಾಜಕೀಯ ರಂಗ ಅನ್ನುವುದೇ ಗಗನ ಕುಸುಮ.
ಸ್ವತಂತ್ರ ಪೂರ್ವದಿಂದಲೂ ಹಲವಾರು ಸ್ವತಂತ್ರ ಹೋರಾಟಗಾರರು ನೆಲಸಿದ ಈ ಕ್ಷೇತ್ರದಲ್ಲಿ, ಜನರ ರಕ್ತದ ಕಣ ಕಣದಲ್ಲೂ ದೇಶ ಪ್ರೇಮ ಹಾಗೂ ಹಿಂದುತ್ವ ನೆಲೆಯೂರಿದೆ. ಇದನ್ನೇ ಬಂಡವಾಳ ಮಾಡಿಕೊಂಡು ಜನರ ಭಾವನೆಯೊಂದಿಗೆ ಆಟವಾಡಿದರು. ಈವರೆಗೂ ಇವರು ಯಾವುದೇ ರೀತಿಯಿಂದ ಪಕ್ಷ ಸಂಘಟನೆ ಇಲ್ಲದೇ ಹೋದರು ಇವರು ಅತಿ ಸುಲಭವಾಗಿ ಸಂಸದರು ಹಾಗೂ ಸಚಿವರೂ ಆಗಿ ಅಧಿಕಾರದ ಮದದ ಆಮಲಿನಲ್ಲಿ ತೇಲಾಡುತ್ತಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದೆ.
ವಿಪರ್ಯಾಸ ಎಂದರೆ 2004ರಲ್ಲಿ ಲೋಕಸಭಾ ಚುನಾವಣೆಗೆ ಮೊದಲು ಬಿ ಫಾರ್ಮ್ ಕೊಟ್ಟಿದ್ದು ಖ್ಯಾತ ಉದ್ಯಮಿ ಮದನ್ ದೇಸಾಯಿ ಅವರಿಗೆ, ಆದರೆ ಅವರು ತಿರಸ್ಕರಿಸಿದ್ದರಿಂದ ಸಂಘಟನಾ ಚತುರರಾದ ರಾಜೇಂದ್ರ ಗೋಖಲೆ ಅವರಿಗೆ ನೀಡಿತ್ತು. ಆದರೆ ಅಂದಿನ ಕೇಂದ್ರ ಸಚಿವರಾದ ಅನಂತಕುಮಾರ್ ಅವರ ಕೃಪಾಕಟಾಕ್ಷದಿಂದ ಬೆಂಗಳೂರಿನಿಂದ ದಿಲ್ಲಿ ಮಾರ್ಗ ಮಧ್ಯದಲ್ಲಿ ರಾಜೇಂದ್ರ ಗೋಖಲೆ ಅವರ ಹೆಸರನ್ನು ಬದಲಾಯಿಸಿ ಅಂದು ಪ್ರಹ್ಲಾದ್ ಜೋಶಿ ಅವರಿಗೆ ಟಿಕೆಟ್ ನೀಡಲಾಯಿತು.
2004 ರಲ್ಲಿ ಸ್ಥಳೀಯ ಕಾರ್ಯಕರ್ತರ ಅಸಮಾಧಾನದ ನಡುವೆಯು ಅಂದಿನ ಜನಪ್ರಿಯ ಪ್ರಧಾನಮಂತ್ರಿಗಳಾದ ಅಟಲ್ ಬಿಹಾರಿ ವಾಜಪೇಯಿ ಜಿ ಅವರ ಆಲೆಯಲ್ಲಿ ಮೊದಲನೇ ಗೆಲವು ಸಾಧಿಸಿದ್ದರು.
ಎರಡನೆ ಅವಧಿಗೆ ಅಂದರೆ 2009 ರಲ್ಲಿ ಪ್ರಹ್ಲಾದ್ ಜೋಶಿ ಅವರು ಲಾಲ್ ಕೃಷ್ಣ ಆಡ್ವಾನಿ ಯವರು ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆಯ ಹಿನ್ನಲೆ ಹಾಗೂ ಅಂದು ಕರ್ನಾಟಕದಲ್ಲಿ ಬಿ.ಎಸ್ ಯಡಿಯೂಪ್ಪ ನವರ ಹೆಸರು ಮತ್ತು ಅವರ ನೇತೃತ್ವದ ಸರ್ಕಾರದ ಜನಪ್ರೀಯತೆಯ ಕಾರ್ಯಗಳನ್ನು ಹೇಳಿಕೊಂಡು ಜಯ ಸಾಧಿಸಿದರು.
ಅನಂತಕುಮಾರ್ ಅವರನ್ನು ಸಭೆ ಸಮಾರಂಭಗಳಲ್ಲಿ ನನ್ನ ಗುರು ಎಂದು ಸಂಬೋದಿಸುತ್ತಿದ್ದ ಪ್ರಲ್ಲಾದ್ ಜೋಶಿ ಅವರು ಒಳಗೊಳಗೆ ಅವರ ವಿರುದ್ಧವೇ ಷಡ್ಯಂತ್ರ ನಡೆಸಿದ್ದು ಅಷ್ಟೇ ದುರಂತವೇ ಸರಿ.
ಇವರ ಮುಂದಿನ ಭವಿಷ್ಯಕ್ಕೆ ದಾರಿದೀಪ ಕಂಡುಕೊಳ್ಳಲು ಕೆಲ ರಾಷ್ಟ್ರೀಯ ಸ್ವಯಂಸೇವಾ ಸಂಘದ ಉನ್ನತ ಮಟ್ಟದ ಪ್ರಚಾರಕರನ್ನು ಕೆಲವೊಂದು ಆಮಿಷದಿಂದ ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ಮತ್ತು ಅವರು ಫಲಾನುಭವಿಗಳು ಹೌದು. ಇದುಕೂಡಾ ಒಂದು ಕಡೆಗೆ ಅವರನ್ನು ರಕ್ಷಾಕವಚದಂತೆ ಕಾಯುತ್ತಿದೆ.
ಇವರಿಗೆ ರಾಷ್ಟ್ರಮಟ್ಟದಲ್ಲಿ ಉನ್ನತ ಪದವಿ ಮತ್ತು ರಾಷ್ಟ್ರ ನಾಯಕರೊಂದಿಗೆ ಸದಾಕಾಲ ಹತ್ತಿರದಲ್ಲಿರುವುದು ಇದು ಇವರ ಅಹಂಗೆ ಕಾರಣ. ಇವೆಲ್ಲವನ್ನು ಗಮನಿಸಿದಾಗ ಬಹಳಷ್ಟು ರಾಷ್ಟ್ರಮಟ್ಟದ ನಾಯಕರು ಸಹ ಹೀಗೆ ಇರಬಹುದೆಂದು ಮೇಲ್ನೋಟಕ್ಕೆ ಕಾಣುತ್ತಿದೆ ಮತ್ತು ಇವರ ಆಮೀಷದಲ್ಲಿರಬಹುದೆಂದು ತೋರುತ್ತದೆ.
ರಾಷ್ಟ್ರೀಯ ನಾಯಕರಲ್ಲಿ ಒಂದು ಮನವಿ ಏನೆಂದರೆ ನೀವು ನಿಜಕ್ಕೂ ಪಕ್ಷವನ್ನು ಬಲಿಷ್ಠಪಡಿಸುವುದೇ ಇದ್ದರೆ, ಈ ಲೋಕಸಭಾ ಕ್ಷೇತ್ರಕ್ಕೆ ಉತ್ತಮ ಸಂಘಟನೆಯ ನಾಯಕರಿಗೆ ಅವಕಾಶ ಕಲ್ಪಿಸಿಕೊಡಲು ವಿನಂತಿ. ಚುನಾವಣೆ ನಂತರ ಮತದಾರಬಾಂಧವರನ್ನು ತುಚ್ಚ ರೀತಿಯಲ್ಲಿ ಕಡೆಗಣೆಸುವಿಕೆ ಕಾರ್ಯಕರ್ತ ಮತ್ತು ಪದಾಧಿಕಾರಿಗಳನ್ನು ಕೇವಲ ಚುನಾವಣೆಗೆಂದೇ ಸೀಮೀತವಾಗಿಟ್ಟುಕೊಂಡು ಅವರನ್ನು ಅತೀ ನೀಚ ಮತ್ತು ತುಚ್ಛವಾಗಿ ಕಾಣುವುದು. ಒಂದು ಕ್ಷಣಕ್ಕೂ ಕೂಡಾ ಕಾರ್ಯಕರ್ತರ ಸಮಸ್ಯೆಯನ್ನು ತಮ್ಮದೆಂದು ಭಾವಿಸದೆ ಅವರನ್ನು ಅವಮಾನಿಸಿ ಉಡಾಫೆ ಉತ್ತರ ನೀಡಿ ಕಳಿಸುವುದು. ಕಳೆದ ಹತ್ತು ವರ್ಷದಿಂದ ಇವರ ಕಾರ್ಯವೈಖರಿ ಅಂತೂ ಹೇಳಲಾಗದು ಅಷ್ಟೋಂದು ಅಧಿಕಾರದ ಮದದಿಂದ ಇವರ ವರ್ತನೆಗೆ ನೊಂದುಕೊಳ್ಳದ ಕರ್ಯಕರ್ತರೇ ಇಲ್ಲ ಎಂದು ತಿಳಿಸಲಾಗಿದೆ.
ಇವರ ಅಧಿಕಾರ ಅವಧಿಯಲ್ಲಿ ಕ್ಷೇತ್ರಕ್ಕೆ ಮೂಲಭೂತ ಸೌಕರ್ಯಗಳನ್ನು ಸರಿಯಾದ ರೀತಿಯಲ್ಲಿ ದೊರಕಿಸದೆ ಇರುವುದು ಇವರ ಅತೀ ದೊಡ್ಡ ಕೊಡುಗೆ. ಕಳೆದ ಹತ್ತು ವರ್ಷದಿಂದ ನರೇಂದ್ರ ಮೋದಿ ಅವರ ಅಲೆಯಲ್ಲಿ ತೆಲಾಡುತ್ತಾ ಸಂಘಟನೆ ಎಂಬ ಪದವನ್ನೇ ಮರೆತಿದ್ದಾರೆ.
ಪಕ್ಷಕ್ಕೆ ಆಗಲಿ ಕ್ಷೇತ್ರಕ್ಕೆ ಆಗಲಿ ಇವರ ಕೊಡುಗೆ ಮಾತ್ರ ಶೂನ್ಯ ಮತ್ತು ಕ್ಷೇತ್ರವನ್ನು ಯಾವ ಯಾವ ಅಯಾಮಗಳಲ್ಲಿ ಹಾಳುಮಾಡಬೇಕೋ ಎಲ್ಲವನ್ನು ಯಶಸ್ವಿಯಾಗಿ ಹಾಳುಮಾಡಿದ್ದಾರೆ. ರಾಷ್ಟ್ರೀಯ ನಾಯಕರುಗಳಾದ ತಾವುಗಳು ಈ ಬಾರಿ ಮತ್ತೆ ಇವರಿಗೆ ಅವಕಾಶ ನೀಡಿದ್ದಾದರೆ ಇನ್ನು ಉಳಿದಿರುವ ಅಲ್ಪ ಸ್ವಲ್ಪವನ್ನು ಕೂಡಾ ಸಂಪೂರ್ಣವಾಗಿ ನಾಶಪಡಿಸುವುದರಲ್ಲಿ ಸಂಶಯವೇ ಇಲ್ಲಾ
ಈಗಾಗಲೇ ಮತದಾರ ಬಾಂಧವರಲ್ಲಿ ಇವರ ಬಗ್ಗೆ ಅಸಮಾಧಾನವು ಮನೆಮಾತಾಗಿದೆ, ಈ ಬಾರಿ ನೀವು ಅವಕಾಶ ಕಲ್ಪಿಸಿದ್ದೇ ಆದರೆ ನರೇಂದ್ರ ಮೋದಿ ಅವರ ಅಲೆಯನ್ನು ಸಹ ಇವರು ನಾಶಮಾಡುತ್ತಾರೆ.
ಧಾರವಾಡ ಲೋಕಸಭಾ ಕ್ಷೇತ್ರದ ಜನರ ದೇಶಪ್ರೇಮ ಹಾಗೂ ಜನರ ಮನದೊಳಗೆ ಸ್ಥಾಪಿತ ನರೇಂದ್ರ ಮೊದಿಯವರ ಅಭಿಮಾನದ ಅಲೆ ಹಾಗೂ ಯುವಕರ ಬಾಯಲ್ಲಿ ಸದಕಾಲ ಹರಿದಾಡುವ "ಮೋದಿ ಮೋದಿ" ಎಂಬ ಘೋಷಣೆಯು ಒಬ್ಬ ಸಾಮಾನ್ಯ ಪ್ರಜೆ ಸ್ಪರ್ದಿಸಿದರೂ ಉತ್ತಮ ಬಹುಮತದಿಂದ ಜಯಭೇರಿ ಹೊಂದುವಂತಹ ಭಾಜಪಾ ಭದ್ರಕೋಟೆ ಇದಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.