ಸರಕಾರದ ಎಲ್ಲಾ ಇಲಾಖೆಯಲ್ಲೂ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ : ಬೊಮ್ಮಾಯಿ
ಬಸವರಾಜ ಬೊಮ್ಮಾಯಿ
ಬೆಂಗಳೂರು : ʼಇಡೀ ಸರಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಯಾವ ಇಲಾಖೆಯಲ್ಲಿ ಹೋದರೂ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆʼ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ʼರಾಜ್ಯದಲ್ಲಿ ಈಗ ಪೇ ಡಬಲ್ ಸಿಎಂ ಆಗಿದೆ. ಭ್ರಷ್ಟಾಚಾರದಲ್ಲಿ ಇಡೀ ಸರಕಾರವೇ ಮುಳುಗಿ ಹೋಗಿದ್ದು, ಮಂತ್ರಿಗಳಿಗೆ ಒಂದು ಪಾಲು, ಸಿಎಂಗೆ ಒಂದು ಪಾಲು ಪಾವತಿಯಾಗುತ್ತಿದೆʼ ಎಂದು ಗಂಭೀರ ಆರೋಪ ಮಾಡಿದ್ದಾರೆ.
ʼಹಿಂದೆ ನಮ್ಮ ವಿರುದ್ದ ಯಾವುದೇ ದಾಖಲೆ ಇಲ್ಲದೇ ವಿನಾಕಾರಣ ಆರೋಪ ಮಾಡಿದ್ದರು. ಈಗ ಅಬಕಾರಿ ಇಲಾಖೆಯಲ್ಲಿ ಕಮಿಷನ್ ಆರೋಪ ಕೇಳಿ ಬಂದಿದೆ. ಹಣಕಾಸು ಇಲಾಖೆ ನೇರವಾಗಿ ಮುಖ್ಯಮಂತ್ರಿಗಳ ಕೈಯಲ್ಲಿಯೇ ಇದೆ. ಒಂದೊಂದು ಲೈಸೆನ್ಸ್ ನೀಡಲು ಎಷ್ಟು ಕಮಿಷನ್ ಪಡೆಯುತ್ತಿದ್ದಾರೆ ಎನ್ನುವುದನ್ನು ಅವರೇ ತನಿಖೆ ನಡೆಸಲಿʼ ಎಂದು ಆಗ್ರಹಿಸಿದರು.
ಅಭಿವೃದ್ಧಿಯನ್ನು ಜನ ಅನುಭವಿಸುತ್ತಿದ್ದಾರೆ :
ಶಿಗ್ಗಾವಿ ಸವಣೂರು ಕ್ಷೇತ್ರದಲ್ಲಿ ಅಭಿವೃದ್ದಿಯೇ ಆಗಿಲ್ಲ ಎಂದು ಕಾಂಗ್ರೆಸ್ ನಾಯಕರು ಮಾಡುತ್ತಿರುವ ಆರೋಪದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ʼಶಿಗ್ಗಾವಿ ಕ್ಷೇತ್ರದ ಅಭಿವೃದ್ಧಿಯನ್ನು ಜನ ಅನುಭವಿಸಿದ್ದಾರೆ. ಕಾಂಗ್ರೆಸ್ ನವರ ಆಲೋಚನೆಗಳಿಗೂ ಶಿಗ್ಗಾವಿ ಜನರ ಆಲೋಚನೆಗಳಿಗೂ ಬಹಳ ವ್ಯತ್ಯಾಸ ಇದೆ. ಶಿಗ್ಗಾವಿಯಲ್ಲಿ ತಾಲೂಕು ಮಟ್ಟದಲ್ಲಿ 200 ಬೆಡ್ ಆಸ್ಪತ್ರೆ, ಟೆಕ್ಸ್ ಟೈಲ್ ಪಾರ್ಕ್ , ಸವಣೂರಿನಲ್ಲಿ ಆಯುರ್ವೆದಿಕ್ ಕಾಲೇಜು , ಐಟಿಐ ಕಾಲೆಜು, ಪ್ರವಾಹ ಸಂದರ್ಭದಲ್ಲಿ 12000 ಕ್ಕಿಂತ ಹೆಚ್ಚು ಮನೆ ನಿರ್ಮಾಣ, ಬೆಂಗಳೂರಿಗಿಂತ ಒಳ್ಳೆಯ ರಸ್ತೆ ಶಿಗ್ಗಾವಿಯಲ್ಲಿವೆ. ಸಿಎಂ ಕಾರಲ್ಲಿ ಹೋಗುವಾಗ ನಿದ್ದೆ ಮಾಡುತ್ತಿರುತ್ತಾರಾ ಏನೋ ಗೊತ್ತಿಲ್ಲʼ ಎಂದು ಹೇಳಿದರು.