ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 200 ಸೀಟು ಬರಬಹುದು : ಸಚಿವ ಸಂತೋಷ್ ಲಾಡ್
ಹುಬ್ಬಳ್ಳಿ: ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಶೇ.37ರಷ್ಟು ಮತಗಳನ್ನು ಪಡೆದಿತ್ತು. ಈ ಬಾರಿ ಅದು ಶೇ.29ರಷ್ಟು ಆಗಬಹುದು. ದೇಶಾದ್ಯಂತ ಬಿಜೆಪಿಗೆ 200 ಸೀಟುಗಳು ಸಿಗಬಹುದು ಎಂದು ಸಮೀಕ್ಷಾ ವರದಿಗಳೇ ಬಹಿರಂಗಪಡಿಸಿವೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆಯು ಕಳೆದ 10 ವರ್ಷಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರ ಮಾಡಿರುವ ಅಭಿವೃದ್ಧಿ ಆಧಾರದ ಮೇಲೆ ನಡೆಯಬೇಕು. ಆದರೆ, ಆರೋಪ-ಪ್ರತ್ಯಾರೋಪಗಳ ಮೇಲೆ ಚುನಾವಣೆ ನಡೆಯುವಂತಾಗಿರುವುದು ದುರ್ದೈವ ಎಂದರು.
ತನ್ನನ್ನು ವಿಶ್ವಗುರು ಎಂದು ಕರೆಸಿಕೊಳ್ಳುವ ನರೇಂದ್ರ ಮೋದಿ ಆಡಳಿತಾವಧಿಯಲ್ಲೆ ದೊಡ್ಡ ದೊಡ್ಡ ಕಂಪೆನಿಗಳು ಮುಚ್ಚಿ ಹೋಗಿ, ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಎಲ್ಲಿ ನೋಡಿದರೂ ವಿಶ್ವಗುರುವಿನ ಜಾಹಿರಾತುಗಳು ರಾರಾಜಿಸುತ್ತಿವೆ. 10 ವರ್ಷಗಳ ಕಾಲ ಇವರು ಅಭಿವೃದ್ಧಿ ಮಾಡಿದ್ದರೆ ಇಷ್ಟೊಂದು ಪ್ರಚಾರದ ಅಗತ್ಯವಿರುತ್ತಿತ್ತೇ ಎಂದು ಸಂತೋಷ್ ಲಾಡ್ ಪ್ರಶ್ನಿಸಿದರು.
ರೆಡ್ಡಿ ಬಿಜೆಪಿ ಸೇರ್ಪಡೆಗೆ ವ್ಯಂಗ್ಯ: ಶಾಸಕ ಗಾಲಿ ಜನಾರ್ದನ ರೆಡ್ಡಿ ತಮ್ಮ ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನಗೊಳಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಈ ಚುನಾವಣೆಯಲ್ಲಿ ಬಿಜೆಪಿಗೆ ಕಡಿಮೆ ಸ್ಥಾನಗಳು ಬರುತ್ತವೆ ಎಂಬುದು ಖಚಿತವಾಗಿದೆ. ಆದುದರಿಂದಲೇ, ಸಣ್ಣಪುಟ್ಟ ಪ್ರಾದೇಶಿಕ ಪಕ್ಷಗಳನ್ನೆಲ್ಲ ವಿಲೀನಗೊಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಬಿಜೆಪಿಗೆ ಸೇರುತ್ತಿದ್ದಂತೆ ಭ್ರಷ್ಟಾಚಾರ, ಅಕ್ರಮಗಳ ಆರೋಪಗಳನ್ನು ಎದುರಿಸುತ್ತಿರುವವರೆಲ್ಲ ‘ವಾಷಿಂಗ್ ಪೌಡರ್ ನಿರ್ಮ’ ಎಂದು ಪರಿಶುದ್ಧರಾಗುತ್ತಾರೆ. ಅದೇ ರೀತಿ, ಈಗ ಜನಾರ್ದನ ರೆಡ್ಡಿ ಬಿಜೆಪಿ ಸೇರಿದ್ದಾರೆ. ಪ್ರಧಾನಿ ಮೋದಿ ‘ನಾ ಖಾವೂಂಗ, ನಾ ಖಾನೆ ದೂಂಗ’ ಎನ್ನುತ್ತಿದ್ದರು. ಈಗ ನೋಡಿದರೆ ಭ್ರಷ್ಟಾಚಾರದ ಆರೋಪ ಹೊತ್ತಿರುವ ಜನಾರ್ದನ ರೆಡ್ಡಿಯನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ ಎಂದು ಸಂತೋಷ್ ಲಾಡ್ ಹೇಳಿದರು.