ಹಾವೇರಿ | ಭೂ ಸ್ವಾಧೀನಪಡಿಸಿಕೊಂಡು 55 ವರ್ಷ ಕಳೆದರೂ ಪರಿಹಾರ ವಿಳಂಬ; ಜಿಲ್ಲಾಧಿಕಾರಿಗಳ ಕಾರು ಜಪ್ತಿ

ಹಾವೇರಿ: 55 ವರ್ಷದ ಹಿಂದಿನ ಭೂ ಸ್ವಾಧೀನ ಪ್ರಕರಣದಲ್ಲಿ ರೈತನಿಗೆ ಪರಿಹಾರ ನೀಡದ ಹಿನ್ನಲೆಯಲ್ಲಿ ಹಾವೇರಿ ಜಿಲ್ಲಾಧಿಕಾರಿಗಳ ಕಾರನ್ನು ಜಪ್ತಿ ಮಾಡಲು ಹಾವೇರಿ ಜಿಲ್ಲೆಯ ಬ್ಯಾಡಗಿ ಪಟ್ಟಣ ನ್ಯಾಯಾಲಯ ಆದೇಶಿಸಿದೆ
ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕೆರೂಡಿ ಗ್ರಾಮದ ರುದ್ರಪ್ಪ ಬಸಪ್ಪ ಗುತ್ತಲ ಎಂಬುವರ 2 ಎಕರೆ 29 ಗುಂಟೆ ಜಮೀನನ್ನು ಭೂ ಸ್ವಾದೀನಪಡಿಸಿಕೊಳ್ಳಲಾಗಿತ್ತು. ಬಳಿಕ ಈ ಜಮೀನ್ನು ಜಿಲ್ಲಾಧಿಕಾರಿ ಸಣ್ಣ ನೀರಾವರಿ ಇಲಾಖೆಗೆ ಹಸ್ತಾಂತರಿಸಿದ್ದರು. ಈ ಜಮೀನಿನ ಭೂ ಸ್ವಾಧೀನಪಡಿಸಿಕೊಂಡು 55 ವರ್ಷ ಕಳೆದರೂ ಪರಿಹಾರ ನೀಡಿರಲಿಲ್ಲ.
ಈ ಬಗ್ಗೆ ಸಂತ್ರಸ್ಥೆ ಶಿವಕ್ಕ ಗುತ್ತಲ ಅವರು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಾಲಯ ಬಡ್ಡಿ ಸಮೇತ 45.80 ಲಕ್ಷ ರೂ. ಪರಿಹಾರ ನೀಡಲು ಆದೇಶಿಸಿತ್ತು. ಆದರೆ ಇದುವರೆಗೂ ಪರಿಹಾರ ನೀಡದ ಹಿನ್ನಲೆ ಸರಕಾರಕ್ಕೆ ಸಂಬಂಧಿಸಿದ ಚರಾಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಕೋರ್ಟ್ ಆದೇಶ ನೀಡಿತ್ತು.
ಕಳೆದ ವರ್ಷ ನವೆಂಬರ್ 23ರಂದು ಪರಿಹಾರ ನೀಡುವುದಾಗಿ ಜಿಲ್ಲಾಧಿಕಾರಿಗಳು ಲಿಖಿತ ಪತ್ರ ನೀಡಿದ್ದರು. ಇದಾದ ಬಳಿಕವೂ ಸಂತ್ರಸ್ಥೆ ಶಿವಕ್ಕ ಗುತ್ತಲ ಅವರಿಗೆ ಪರಿಹಾರ ಸಂದಾಯ ಆಗಿರಲಿಲ್ಲ. ಹೀಗಾಗಿ ಜಿಲ್ಲಾಧಿಕಾರಿಗಳ ಕಾರು ಜಪ್ತಿ ಮಾಡಲಾಗಿದೆ.