ಸಿದ್ದರಾಮಯ್ಯನವರ ಶಕ್ತಿ ಅಡಗಿಸಲು ಕೇಂದ್ರದ ನಾಯಕರು ಎದ್ದು ಬಿದ್ದು ಪ್ರಯತ್ನಿಸುತ್ತಿದ್ದಾರೆ: ಸಚಿವ ಆರ್.ಬಿ.ತಿಮ್ಮಾಪುರ
ಹುಬ್ಬಳ್ಳಿ: ಸಿದ್ದರಾಮಯ್ಯನವರ ನಾಯಕತ್ವ ಮತ್ತು ಶಕ್ತಿ ಕುಂದಿಸಲು ಬಿಜೆಪಿಗರು ಪ್ರಯತ್ನಿಸುತ್ತಿದ್ದಾರೆ. ಇದು ಯಾವುದೇ ಕಾರಣಕ್ಕೂ ನಡೆಯುವುದಿಲ್ಲ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಭೇಟಿಗೆ ಬಂದಿದ್ದೇನೆ. ಸಿದ್ದರಾಮಯ್ಯನವರ ಶಕ್ತಿ ಅಡಗಿಸಲು ಕೇಂದ್ರದ ನಾಯಕರು ಎದ್ದು ಬಿದ್ದು ಪ್ರಯತ್ನಿಸುತ್ತಿದ್ದಾರೆ. ಇದ್ಯಾವುದೂ ಸಿದ್ದರಾಮಯ್ಯನವರ ಮುಂದೆ ನಡೆಯಲ್ಲ. ಉಪ ಚುನಾವಣೆ ಹಿನ್ನೆಲೆಯಲ್ಲಿ ನಾವು ಈಗ ಸಭೆ ನಡೆಸುತ್ತಿದ್ದೇವೆ. ಶಿಗ್ಗಾಂವ ಕ್ಷೇತ್ರದಲ್ಲಿ ಗೆಲುವು ನಮ್ಮದೇ ಎಂದರು.
ಅಬಕಾರಿ ಇಲಾಖೆಯಲ್ಲಿ ಯಾವುದೇ ವರ್ಗಾವಣೆ ಮಾಡಿಲ್ಲ. ಸಹಜವಾಗಿ ಅಧಿಕಾರಿಗಳಿಗೆ ಬಡ್ತಿ ನೀಡಿದ್ದೇವೆ. ಹೊಸದಾಗಿ ಮದ್ಯದಂಗಡಿಗಳಿಗೆ ಲೈಸನ್ಸ್ ನೀಡುವ ಬಗ್ಗೆ ಸರ್ಕಾರ ಯೋಚಿಸಿದೆ ಎಂದು ತಿಳಿಸಿದರು.
ವರ್ಗಾವಣೆ ವಿಷಯದಲ್ಲಿ ಕೋಟ್ಯಾಂತರ ರೂಪಾಯಿ ಹಣ ಪಡೆಯಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಕೋಟ್ಯಾಂತರ ರೂಪಾಯಿ ಹಣ ನೋಡಿಲ್ಲ, ಯಾರಾದರೂ ಇದ್ದರೇ ತೋರಿಸಿ ಎಂದು ತಿರುಗೇಟು ನೀಡಿದರು.