ನೇಹಾ ಹಿರೇಮಠ್ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ : ಕುಟುಂಬಸ್ಥರಿಗೆ ಸಾಂತ್ವನ
ಹುಬ್ಬಳ್ಳಿ : ಬಿವಿಬಿ ಕಾಲೇಜಿನಲ್ಲಿ ಕೊಲೆಯಾದ ನೇಹಾ ಹಿರೇಮಠ್ ಮನೆಗೆ ಸಿಎಂ ಸಿದ್ಧರಾಮಯ್ಯ ಅವರು ಆಗಮಿಸಿದ್ದು, ನೇಹಾಳ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಹುಬ್ಬಳ್ಳಿಯ ಬಿಡನಾಳದಲ್ಲಿರುವ ನೇಹಾ ಮನೆಗೆ ಆಗಮಿಸಿದ ಸಿಎಂ ಸಿದ್ಧರಾಮಯ್ಯನವರಿಗೆ ಸಚಿವ ಸಂತೋಷ್ ಲಾಡ್, ಹುಬ್ಬಳ್ಳಿ-ದಾರವಾಡ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ಸಾಥ್ ನೀಡಿದ್ದು, ಕುಟುಂಬಸ್ಥರಿಗೆ ಧೈರ್ಯ ತುಂಬುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಭಾವಚಿತ್ರಕ್ಕೆ ಗೌರವ ಸಲ್ಲಿಸಿದ ಸಿಎಂ
ನೇಹಾ ಹಿರೇಮಠ್ ಮನೆಗೆ ಆಗಮಿಸಿದ ಸಿಎಂ ಸಿದ್ಧರಾಮಯ್ಯ ಅವರು, ನೇಹಾ ತಂದೆ ತಾಯಿಗೆ ಸಾಂತ್ವನ ಹೇಳಿದ ಬಳಿಕ ನೇಹಾ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.
ನೇಹಾ ಕುಟುಂಬದ ಜೊತೆಗೆ ನಾವಿದ್ದೇವೆ
ನೇಹಾ ಹಿರೇಮಠ್ ಮನೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ನೇಹಾ ಕುಟುಂಬದ ಜೊತೆಗೆ ನಾವಿದ್ದೇವೆ. ಎಲ್ಲ ಮಗ್ಗಲುಗಳಲ್ಲಿಯೂ ತನಿಖೆ ಮಾಡಲು ಸೂಚಿಸಿದ್ದೇನೆ. ಆರೋಪಿಯನ್ನು ಬಂಧಿಸಿದ್ದು, ಸಿಐಡಿ ತನಿಖೆಯು ಆರಂಭಗೊಂಡಿದೆ" ಎಂದರು.
ಬಿಜೆಪಿ ರಾಜಕೀಯ ಮಾಡುತ್ತಿದ್ದು, ಒಂದು ಪ್ರಕಣವನ್ನಾದರೂ ಬಿಜೆಪಿಯು ಸಿಬಿಐಗೆ ಕೊಟ್ಟಿದೆಯೇ? ನಮ್ಮ ಅವಧಿಯಲ್ಲಿ ಸಾಕಷ್ಟು ಪ್ರಕರಣಗಳನ್ನು ಸಿಬಿಐಗೆ ಕೊಟ್ಟಿದ್ದೆವು ಎಂದು ಹೇಳಿದರು.
ನೇಹಾ ಕುಟುಂಬದ ಜೊತೆಗೆ ನಾವಿರುತ್ತೇವೆ. ಅವರಿಗೆ ರಕ್ಷಣೆ ಬೇಕಿದ್ದರೆ ಕೊಡುತ್ತೇವೆ. ಸಿಐಡಿ ಅಧಿಕಾರಿಗಳು ತನಿಖೆ ಮಾಡುತ್ತಿದ್ದು, ವಿಶೇಷ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸುತ್ತಾರೆ. ನಂತರ ಕೋರ್ಟ್ ನಲ್ಲಿ ಟ್ರಯಲ್ ನಡೆಯುತ್ತದೆ. ಆದಷ್ಟು ಬೇಗ ನ್ಯಾಯಾಲಯದಲ್ಲಿ ಗರಿಷ್ಠ ಮಟ್ಟದಲ್ಲಿ ಶಿಕ್ಷೆ ಆಗುತ್ತದೆ. 120 ದಿನದ ಒಳಗೆ ನ್ಯಾಯ ಕೊಡಿಸೋಣ ಎಂದು ನಿರಂಜನ್ ಹಿರೇಮಠ್ ಬೆನ್ನು ತಟ್ಟಿ ಸಾಂತ್ವನ ಹೇಳಿದರು.