ರಾಜ್ಯದಲ್ಲಿ ಸಿಬಿಐ ತನಿಖೆಗೆ ನಿರ್ಬಂಧ ಹೇರಿದ್ದ ಕಾಂಗ್ರೆಸ್ ಸರಕಾರ ಈಗ ಎನ್‌ಐಎ ತನಿಖೆಗೂ ತಡೆವೊಡ್ಡುತ್ತಿದೆ : ಪ್ರಹ್ಲಾದ್ ಜೋಶಿ
ಹುಬ್ಬಳ್ಳಿ: "ರಾಜ್ಯದಲ್ಲಿ ಸಿಬಿಐ ತನಿಖೆಗೆ ನಿರ್ಬಂಧ ಹೇರಿದ ಕಾಂಗ್ರೆಸ್ ಸರಕಾರ ಈಗ ಭಯೋತ್ಪಾದನಾ ಪ್ರಕರಣಗಳ ಎನ್‌ಐಎ ತನಿಖೆಗೂ ತಡೆವೊಡ್ಡುತ್ತಿದೆ" ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ.
ಶುಕ್ರವಾರ ಹುಬ್ಬಳ್ಳಿಯಲ್ಲಿ ಮಾದ್ಯಮದೊಂದಿಗೆ ಮಾತನಾಡಿದ ಅವರು, ಹಳೇ ಹುಬ್ಬಳ್ಳಿ ಗಲಭೆ ಪ್ರಕರಣವನ್ನು ಎನ್‌ಐಎ ತನಿಖೆಯಿಂದ ಹಿಂಪಡೆಯುವ ರಾಜ್ಯ ಸಚಿವ ಸಂಪುಟದ ನಿರ್ಧಾರವನ್ನು ತೀವ್ರವಾಗಿ ಖಂಡಿಸಿದರು.
"ಹುಬ್ಬಳ್ಳಿ ಗಲಭೆ ಪ್ರಕರಣ ಎನ್‌ಐಎ ತನಿಖೆಯಿಂದ ವಾಪಸ್ ಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಚಿವ ಸಂಪುಟ ನಿರ್ಧರಿಸಿರುವುದು ಅವರ ಮತಾಂಧತೆಯ ಪರಮಾವಧಿಯನ್ನು ಪ್ರತಿಬಿಂಬಿಸುತ್ತದೆ. ಹಳೇ ಹುಬ್ಬಳ್ಳಿ ಗಲಭೆ ಭಯೋತ್ಪಾದನಾ ಚಟುವಟಿಕೆಗೆ ಸಮಾನವಾದ ಘಟನೆಯಾಗಿದ್ದು, ಪ್ರಕರಣ ಎನ್ಐಎ ನ್ಯಾಯಾಲಯದಲ್ಲಿದೆ. ಹಾಗಿದ್ದಾಗ್ಯೂ ಸರಕಾರ ಈ ನಿಲುವು ತಳೆದಿರುವುದು ಸರಿಯಲ್ಲ" ಎಂದು ಆಕ್ಷೇಪಿಸಿದರು.
"ಹೈಕೋರ್ಟ್, ಸುಪ್ರಿಂಕೋರ್ಟ್ ಹಾಗೂ ವಿಚಾರಣಾ ನ್ಯಾಯಾಲಯಗಳಲ್ಲಿ ಆರೋಪಿಗಳ ಜಾಮೀನು ತಿರಸ್ಕೃತಗೊಂಡಿದೆ. ಪೊಲೀಸ್ ಮತ್ತು ನ್ಯಾಯಾಂಗ ಇಲಾಖೆಗಳು ಪ್ರಕರಣ ಹಿಂಪಡೆಯಲು ವಿರೋಧಿಸಿದರೂ ರಾಜ್ಯ ಕಾಂಗ್ರೆಸ್ ಸರಕಾರದ ಈ ನಡೆ ಗಲಭೆಕೋರರಿಗೆ ಕುಮ್ಮಕ್ಕು ಕೊಡುವಂತಿದೆ" ಎಂದು ಅವರು ಹರಿಹಾಯ್ದರು.
ತುಷ್ಟೀಕರಣದ ಪರಾಕಾಷ್ಠೆ: ಹಳೇ ಹುಬ್ಬಳ್ಳಿ ಗಲಭೆ ಪ್ರಕರಣವನ್ನು ಎನ್‌ಐಎಯಿಂದ ವಾಪಸ್ ಪಡೆಯುವ ಮೂಲಕ ಕಾಂಗ್ರೆಸ್ ಸರಕಾರ ತುಷ್ಟೀಕರಣದ ಪರಾಕಾಷ್ಟೆ ಮೆರೆಯುತ್ತಿದೆ ಎಂದು ಜೋಶಿ ವಾಗ್ದಾಳಿ ಮಾಡಿದರು.