ದೇಶವನ್ನು ಮಾವೋವಾದಿ ವ್ಯವಸ್ಥೆಗೆ ನೂಕಲು ಕಾಂಗ್ರೆಸ್ ಹೊರಟಿದೆ : ಪ್ರಹ್ಲಾದ್ ಜೋಶಿ
ಹುಬ್ಬಳ್ಳಿ : ಕಾಂಗ್ರೆಸ್ ಪಕ್ಷ ದೇಶವನ್ನು ಒಂದು ರೀತಿ ಮಾವೋವಾದಿ ವ್ಯವಸ್ಥೆಗೆ ನೂಕಲು ಹೊರಟಂತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,"ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಮತ್ತು ಆ ನಾಯಕರ ಭಾಷಣ ಕೇಳಿದರೆ ಇದು ಸ್ಪಷ್ಟವಾಗುತ್ತಿದೆ. ಮಾವೋವಾದಿ ವ್ಯವಸ್ಥೆ ಜಗತ್ತಿನಲ್ಲೆ ವಿಫಲತೆ ಕಂಡಿದೆ. ಆದರೆ, ಕಾಂಗ್ರೆಸ್ ಭಾರತದಲ್ಲಿ ಅದನ್ನು ತರಲು ಹೊರಟಂತಿದೆ. ಜನ ಎಚ್ಚರದಿಂದ ಇರಬೇಕು" ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ದೇಶದ ಎಲ್ಲ ವರ್ಗದ ಜನರ ಆಸ್ತಿ ಕಸಿದುಕೊಳ್ಳುವ ಹುನ್ನಾರ ಅದರ ಪ್ರಣಾಳಿಕೆಯಲ್ಲಿ ಇದ್ದಂತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗದ ಜನರ ಆಸ್ತಿ ಸರ್ವೇ ಮಾಡುವುದಾಗಿ ಹೇಳಿದೆ. ಅಂದರೆ, ಯಾರಲ್ಲಿ 2 ಮನೆ, 2 ವಾಹನ ಇರುವುದೋ ಅವರಿಂದ ಒಂದೊಂದು ಕಸಿದುಕೊಳ್ಳುವ ಸಂಚು ಅದು ಎಂದು ಅವರು ಆರೋಪಿಸಿದರು.
ಬಡವರಿಗೆ ಏನು ಬೇಕೋ ಅದನ್ನು ಮಾಡುವುದು ಸರಕಾರದ ಕರ್ತವ್ಯ. ಆದರೆ, ಕಾಂಗ್ರೆಸ್ ಆ ನೆಪದಲ್ಲಿ ಎಲ್ಲ ವರ್ಗದವರನ್ನು ಟಾರ್ಗೆಟ್ ಮಾಡುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ದೇಶಕ್ಕೆ, ಬಡವರಿಗೆ ನಿಜವಾಗಿ ಒಳಿತು ಮಾಡಬೇಕೆಂಬ ಮನಸಿಲ್ಲ. ತುಷ್ಟೀಕರಣದ ಪರಾಕಾಷ್ಠೆ ತಲುಪಿದ್ದಾರೆ ಎಂದು ಪ್ರಹ್ಲಾದ್ ಜೋಶಿ ಹೇಳಿದರು.
ಸಿಎಂಗೆ ನಿಜವಾದ ಕಾಳಜಿಯಿಲ್ಲ: ಸಿಎಂ ಸಿದ್ದರಾಮಯ್ಯ ಅವರಿಗೆ ನೇಹಾ ಕುಟುಂಬದ ಮೇಲೆ ನಿಜವಾದ ಕಾಳಜಿಯಿಲ್ಲ. ಇದ್ದಿದ್ದರೆ ಘಟನೆ ನಡೆದ ದಿನವೇ ನೇರವಾಗಿ ಕಾರ್ಪೊರೇಟರ್ ನಿರಂಜನ್ ಅವರಿಗೆ ಕರೆ ಮಾಡಿ ಅವರ ಧಾಟಿ, ಭಾಷೆಯಲ್ಲೆ ಸಾಂತ್ವನ, ಧೈರ್ಯ ನೀಡಿತ್ತಿದ್ದರು ಎಂದು ಅವರು ತಿಳಿಸಿದರು.
ನೇಹಾ ಮನೆಗೆ ಸಚಿವರಾದ ಸಂತೋಷ್ ಲಾಡ್, ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿ ನೀಡಿದಾಗಲೆ ಸಿಎಂ ಫೋನ್ ನಲ್ಲಿ ಮಾತನಾಡಬಹುದಿತ್ತು. ಆದರೆ, ಎಚ್.ಕೆ.ಪಾಟೀಲ್ ಅವರನ್ನು ಕಳಿಸಿ, ತಾವು ಫೋನ್ ನಲ್ಲಿ ಸಾಂತ್ವನ ಹೇಳಬೇಕಿತ್ತೆ? ಎಂದು ಪ್ರಶ್ನಿಸಿದ ಅವರು, ನೇಹಾ ಹತ್ಯೆ ಬಗ್ಗೆ ಹಳ್ಳಿ ಹಳ್ಳಿಗಳಲ್ಲಿ ಪ್ರತಿ ಮನೆಯ ಮಾತಾಗಿದೆ. ಸರಕಾರದ ನಡೆ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ ಎಂದರು.