ಕಾಂಗ್ರೆಸ್ನವರು ಕೇಂದ್ರದ ವಿರುದ್ದ ಪ್ರತಿಭಟನೆ ಮಾಡಿದರೆ ಚುನಾವಣೆಯಲ್ಲಿ ಗೆಲ್ಲುತ್ತೇವೆಂಬ ಭ್ರಮೆಯಲ್ಲಿದ್ದಾರೆ : ಬೊಮ್ಮಾಯಿ
Photo : x/@BSBommai
ಹಾವೇರಿ : ಕೇಂದ್ರ ಸರ್ಕಾರ ನೀಡಿರುವ ಪರಿಹಾರದ ಮೊತ್ತಕ್ಕೆ ಸಮನಾಗಿ ರಾಜ್ಯ ಸರ್ಕಾರವೂ ತನ್ನ ಖಜಾನೆಯಿಂದ ಹಣ ಹಣ ಸೇರಿಸಿ ರೈತರಿಗೆ ಬರ ಪರಿಹಾರವನ್ನು ತಕ್ಷಣವೇ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಹಾವೇರಿಯಲ್ಲಿಂದು ತುರ್ತು ಪತ್ರಿಕಾಗೋಷ್ಠಿ ನಡೆಸಿ ಯುಪಿಎ ಹಾಗೂ ಎನ್ಡಿಎ ಅವಧಿಯಲ್ಲಿ ರಾಜ್ಯಕ್ಕೆ ಬಿಡಿಗಡೆಯಾದ ಪರಿಹಾರದ ದಾಖಲೆ ಬಿಡುಗಡೆ ಮಾಡಿ ಮಾತಮಾಡಿದರು.
"ಬರ ಪರಿಹಾರದ ಬಗ್ಗೆ ಕಾಂಗ್ರೆಸ್ ಸರ್ಕಾರ ಹಿಂದೆಂದು ಕಾಣದ ರಾಜಕಾಣರ ಮಾಡುತ್ತಿದೆ. ಕೇಂದ್ರದಿಂದ ಬರ ಪರಿಹಾರ ಬಿಡುಗಡೆ ವಿಳಂಬ ಆಯಿತು ಎಂದು ಕಾಂಗ್ರೆಸ್ ನವರು ಹೇಳಿದ್ದಾರೆ. ಯುಪಿಎ ಅವಧಿಯಲ್ಲಿ ಒಂದು ವರ್ಷ, ಎಂಟು ತಿಂಗಳ ನಂತರ ಬರ ಪರಿಹಾರ ಕೊಟ್ಟಿದ್ದಾರೆ. ಆಗ ಎಂದೂ ಪ್ರತಿಭಟನೆ ಮಾಡದ ಕಾಂಗ್ರೆಸ್ ನವರು ಇವತ್ತು ಪ್ರತಿಭಟನೆ ಮಾಡುತ್ತಿದ್ದಾರೆ. ಆನೆ ಹೊಟ್ಟಿಗೆ ಅರೆ ಕಾಸಿನ ಮಜ್ಜಿಗೆ ಅಂತ ಹೇಳಿದ್ದಾರೆ. ಆದರೆ, ಯುಪಿಎ ಅವಧಿಯಲ್ಲಿ ಹತ್ತು ವರ್ಷದಲ್ಲಿ 1954 ಕೋಟಿ ರೂ. ಪರಿಹಾರ ಕೊಟ್ಟಿದ್ದಾರೆ" ಎಂದು ಹೇಳಿದರು.
2004-05 ರಲ್ಲಿ ರಾಜ್ಯ ಸರ್ಕಾರ 1147 ಕೋಟಿ ರೂ. ಕೇಳಿತ್ತು, ಆಗ ಅವರು ಕೊಟ್ಠಿದ್ದು, 83 ಕೋಟಿ ಕೇವಲ ಶೇ.7 ನೀಡಿದೆ. 2006-07ರಲ್ಲಿ ರಾಜ್ಯ ಸರ್ಕಾರ 1262 ಕೇಳಿತ್ತು, ಕೇಂದ್ರ ಸರ್ಕಾರ ಕೊಟ್ಟಿದ್ದು 78 ಕೋಟಿ ರೂ. 2008-09 ರಲ್ಲಿ ರಾಜ್ಯ ಸರ್ಕಾರ 2043 ಕೋಟಿ ರೂ. ಬೇಡಿಕೆ ಸಲ್ಲಿಸಿತ್ತು. ಕೇಂದ್ರ ಕೊಟ್ಟಿದ್ದು 83 ಕೋಟಿ ರೂ. ಮಾತ್ರ.2011-12 ರಲ್ಲಿ 6214 ಕೋಟಿ ರೂ. ಪರಿಹಾರಕ್ಕೆ ಬೇಡಿಕೆ ಇಟ್ಟಿತ್ತು. ಕೇಂದ್ರ ಸರ್ಕಾರ 760 ಕೋಟಿ ರೂ. ನೀಡಿತ್ತು. 2012-13 ರಲ್ಲಿ 7642 ಕೋಟಿ ರೂ. ಪರಿಹಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಆಗ ಕೇಂದ್ರದಿಂದ 526 ಕೋಟಿ ರೂ.ಬಿಡುಗಡೆಯಾಗಿತ್ತು. 2013-14 ರಲ್ಲಿ 877.ಕೋಟಿ ರೂ. ಪರಿಹಾರಕ್ಕೆ ಮನವಿ ಸಲ್ಲಿಸಿತ್ತು ಕೇಂದ್ರ ಸರ್ಕಾರ 308 ಮಾತ್ರ ಬಿಡುಗಡೆ ಮಾಡಿತ್ತು ಎಂದು ವಿವರಣೆ ನೀಡಿದರು.
ಇನ್ನು 2014 ರಿಂದ 24 ರ ವರೆಗೆ ಎನ್ ಡಿಎ ಅವಧಿಯಲ್ಲಿ 2014-15 ರಲ್ಲಿ ರಾಜ್ಯ ಸರ್ಕಾರ 930 ಕೋಟಿ ರೂ. ಪರಿಹಾರಕ್ಕೆ ಬೇಡಿಕೆ ಸಲ್ಲಿಸಿತ್ತು. ಕೇಂದ್ರ ಸರ್ಕಾರ 305 ಕೋಟಿ ರೂ. ಪರಿಹಾರ ನೀಡಿತ್ತು. 2015-16 ರಲ್ಲಿ 5247 ಕೋಟಿ ರೂ. ಪರಿಹಾರಕ್ಕೆ ಮನವಿ ಸಲ್ಲಿಸಿತ್ತು. ಕೇಂದ್ರ ಸರ್ಕಾರ 2263 ಕೋಟಿ ರೂ. ಬಿಡುಗಡೆ ಮಾಡಿತ್ತು. 2016-17 ರಲ್ಲಿ 7572 ಕೋಟಿ ರೂ. ಪರಿಹಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಕೇಂದ್ರ ಸರ್ಕಾರ 2577 ಕೋಟಿ ರೂ. ಪರಿಹಾರ ನೀಡಿತ್ತು. 2018-19 ರಲ್ಲಿ ರಾಜ್ಯ ಸರ್ಕಾರ 4064 ಕೋಟಿ ರೂ. ಮನವಿ ಮಾಡಿತ್ತು. ಕೇಂದ್ರ ಸರ್ಕಾರ 1040 ಕೋಟಿ ರೂ. ಬಿಡುಗಡೆ ಮಾಡಿತ್ತು ಎಂದು ವಿವರಿಸಿದರು,
ದುಪ್ಪಟ್ಟು ಪರಿಹಾರ
ನಮ್ಮ ಕಾಲದಲ್ಲಿ ಹಾಗೂ ಯಡಿಯೂರಪ್ಪ ಅವರ ಅವಧಿಯಲ್ಲಿ ಪ್ರವಾಹ ಬಂದಾಗ ಮನೆ ಕಳೆದುಕೊಂಡವರಿಗೆ ತಕ್ಷಣ ಪರಿಹಾರವಾಗಿ 10 ಸಾವಿರ ಬಿಡುಗಡೆ ಮಾಡಿದ್ದೇವು. ಪೂರ್ಣ ಪ್ರಮಾಣದ ಮನೆ ಬಿದ್ದರೆ 5 ಲಕ್ಷ, ಭಾಗಶಹ ಬಿದ್ದರೆ 3 ಲಕ್ಷ, ಹಾಗೂ ಅಲ್ಪ ಪ್ರಮಾಣದ ಹಾನಿಗೆ 50 ಸಾವಿರ ರೂ. ಪರಿಹಾರ ನೀಡಿದ್ದೇವು. ಈಗಿನ ಕಾಂಗ್ರೆಸ್ ಸರ್ಕಾರ ತನ್ನ ಖಜಾನೆಯಿಂದ ನಯಾಪೈಸೆ ಪರಿಹಾರ ನೀಡಿಲ್ಲ. ಹೀಗಾಗಿ ತಮ್ಮ ತಪ್ಪು ಮುಚ್ಚಿಕೊಳ್ಳಲು ಈ ನಾಟಕ ಹೂಡಿದ್ದಾರೆ, ನೀವು ರಾಜ್ಯ ಸರ್ಕಾರದ ಖಜಾನೆಯಿಂದ ಹಣ ಬಿಡುಗಡೆ ಮಾಡಿದ್ದರೆ ಕೇಂದ್ರದ ವಿರುದ್ದ ಪ್ರತಿಭಟನೆ ಮಾಡುವ ನೈತಿಕತೆ ಇರುತ್ತಿತ್ತು ಎಂದು ಹೇಳಿದರು.
ಪ್ರಧಾನಿ ಮೋದಿ ಟೀಕಿಸುವುದು ಫ್ಯಾಷನ್
ನಮ್ಮ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುವುದು ರಾಜಕಾರಣದ ಫ್ಯಾಷನ್ ಆಗಿದೆ. ಕಾಂಗ್ರೆಸ್ ಗೆ ಮೋದಿ ಫೋಬಿಯಾ ಶುರುವಾಗಿದೆ. ಮೋದಿ ಟೀಕಿಸಿದರೆ ತಮ್ಮ ಪ್ರಚಾರ ಹೆಚ್ಚಾಗುತ್ತದೆ ಎಂದುಕೊಂಡಿದ್ದಾರೆ. ಆದರೆ, ಮೋದಿಯವರನ್ನು ಟೀಕಿಸಿದಷ್ಟು ಮೋದಿಯವರ ವರ್ಚಸ್ಸು ಹೆಚ್ಚಾಗುತ್ತಿದೆ ಎಂದು ಹೇಳಿದರು.
ಹಾವೇರಿ ಕ್ಷೇತ್ರಕ್ಕೆ ನಡ್ಡಾ, ಅಮಿತ್ ಶಾ ಆಗಮನ
ಎ.30 ರಂದು ಜೆಪಿ ನಡ್ಡಾ ಆಗಮಿಸಲಿದ್ದು, ಅಂದು ಕಾಗಿನೆಲೆಗೆ ಬಂದು ದೇವರ ದರ್ಶನ ಪಡೆದು, ಪ್ರಮುಖರ ಭೇಟಿ ಮಾಡಿ, ನಂತರ ಮೊಟೆಬೆನ್ನೂರಿನಲ್ಲಿ ರೋಡ್ ಶೋ ನಡೆಸಲಿದ್ದಾರೆ. ಕೆಂದ್ರ ಗೃಹ ಸಚಿವ ಅಮಿತ್ ಶಾ ಅವರು ಮೇ.1ಕ್ಕೆ ರಾಣೆಬೆನ್ನೂರಿಗೆ ಬರುತ್ತಾರೆ. ರೋಡ್ ಶೋ ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.