ಪ್ರಹ್ಲಾದ್ ಜೋಶಿ ವಿರುದ್ಧ ಭ್ರಷ್ಟಾಚಾರ ಆರೋಪ: ಹುಬ್ಬಳ್ಳಿಯ ಎಂಟಿಎಸ್ ಕಾಲೋನಿಯ ಲೀಸ್ ಟೆಂಡರ್ ರದ್ದುಗೊಳಿಸಿದ ರೈಲ್ವೆ ಬೋರ್ಡ್
ಪ್ರಹ್ಲಾದ್ ಜೋಶಿ
ಹುಬ್ಬಳ್ಳಿ: ಸಾಕಷ್ಟು ವಿವಾದ ಸೃಷ್ಠಿಸಿದ್ದ ಹುಬ್ಬಳ್ಳಿಯ ಎಂಟಿಎಸ್ ಕಾಲೋನಿಯ 13 ಎಕರೆ ಜಮೀನಿನ ಟೆಂಡರ್ ಪ್ರಕ್ರಿಯೆಯನ್ನು ರೈಲ್ವೆ ಲ್ಯಾಂಡ್ ಡೆವಲಂಪ್ಮೆಂಟ್ ಅಥಾರಿಟಿ (RLDA) ಬೋರ್ಡ್ ರದ್ದುಗೊಳಿಸಿ ಆದೇಶಿಸಿದೆ.
ಎಂಟಿಎಸ್ ಕಾಲೋನಿಯ 13 ಎಕರೆ ಜಮೀನನನ್ನು 99 ವರ್ಷ ಲೀಸ್ ಗೆ ನೀಡಲು ಟೆಂಡರ್ ಕರೆಯಲಾಗಿತ್ತು. ಇದು ಹುಬ್ಬಳ್ಳಿಯ ಹೃದಯ ಭಾಗದಲ್ಲಿತ್ತು. ಹಾಗೆಯೇ ಖಾಲಿ ಜಾಗದಲ್ಲಿ 13 ಎಕರೆ ಜಾಗ ಲೀಸ್ ಗೆ ಇದೆ ಎಂದು ಬೋರ್ಡ್ ಹಾಕಿತ್ತು.
ಈ ವಿಚಾರದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಹೆಸರು ತಳಕು ಹಾಕಿತ್ತು. ಜೋಶಿ ವಿರುದ್ಧ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಗಂಭೀರ ಆರೋಪ ಮಾಡಿದ್ದರು. 1300 ಕೋಟಿ ರೂಪಾಯಿ ಭ್ರಷ್ಟಾಚಾರದಲ್ಲಿ ಜೋಶಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದರಲ್ಲದೆ, ಸರಕಾರಿ ಭೂಮಿ ಕಬಳಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.
ಸ್ಥಳೀಯ ಮಟ್ಟದಲ್ಲಿ ಕಾಂಗ್ರೆಸ್ ನಾಯಕರು ಈ ಕುರಿತು ಹೋರಾಟ ಮಾಡಿದ್ದರು. ಇದರ ಪರಿಣಾಮವಾಗಿ ಇದೀಗ ರೈಲ್ವೆ ಅಥಾರಿಟಿ, ಜಮೀನನನ್ನು ಟೆಂಡರ್ ನೀಡುವ ಇಡೀ ಪ್ರಕ್ರಿಯೆಯನ್ನು ರದ್ದುಗೊಳಿಸಿ ಆದೇಶಿಸಿದೆ. ಆ ಹಿಂದೆ ಐದು ಬಾರಿ ಟೆಂಡರ್ ಕರೆದಾಗ ಯಾರೂ ಆಸಕ್ತಿ ತೋರಿಸಿರಲಿಲ್ಲ.