ಧಾರವಾಡ | ಚುನಾವಣಾ ಕಣದಿಂದ ಹಿಂದೆ ಸರಿಯಲು ದಿಂಗಾಲೇಶ್ವರ ಸ್ವಾಮೀಜಿ ನಿರ್ಧಾರ?
ಧಾರವಾಡ : ರಾಜ್ಯದ ಎರಡನೇ ಹಂತದ ಲೋಕಸಭಾ ಚುನಾವಣೆಗೆ ನಾಮಪತ್ರ ಹಿಂಪಡೆಯಲು ಇಂದು ಕೊನೆಯ ದಿನವಾಗಿದ್ದು, ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಪ್ರಹ್ಲಾದ್ ಜೋಶಿ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ವಾಪಸ್ ಪಡೆಯಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.
ಧಾರವಾಡ ಲೋಕಸಭಾ ಕ್ಷೇತ್ರದಿಂದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಮತ್ತೆ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಿದ ಬೆನ್ನಲ್ಲೇ ದಿಂಗಾಲೇಶ್ವರ ಸ್ವಾಮೀಜಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿವುದಾಗಿ ಘೋಷಿಸಿದ್ದರು. ಅಲ್ಲದೇ, ಜೋಶಿ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದ ಸ್ವಮೀಜಿಗಳು, ತಮ್ಮ ಸಾವಿರಾರು ಬೆಂಬಲಿಗರ ನೇತೃತ್ವದಲ್ಲಿ ನಾಮಪತ್ರವನ್ನು ಸಹ ಸಲ್ಲಿಸಿದ್ದರು.
ಶಿರಹಟ್ಟಿ ಫಕೀರೇಶ್ವರ ಮಠದ ಹಿರಿಯ ಪೀಠಾಧಿಪತಿ ಶಿವಯೋಗಿ ಸಿದ್ಧರಾಮ ಸ್ವಾಮೀಜಿಗಳು ದಿಂಗಾಲೇಶ್ವರ ಸ್ವಾಮೀಜಿಗೆ ಚುನಾವಣಾ ಕಣದಿಂದ ಹಿಂದೆ ಸರಿಯಲು ಸೂಚಿಸಿದ್ದಾರೆ ಎನ್ನಲಾಗಿದೆ. ಒಂದು ವೇಳೆ ನಾಮಪತ್ರ ಹಿಂಪಡೆದರೆ, ದಿಂಗಾಲೇಶ್ವರ ಸ್ವಾಮೀಜಿ ಯಾರಿಗೆ ಬೆಂಬಲ ನೀಡಲಿದ್ದಾರೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.