ತಪ್ಪಾಗಿದ್ದರೆ ಸ್ವಾಮೀಜಿ ಬಳಿ ಕ್ಷಮೆ ಕೇಳಲು ಹಿಂಜರಿಯಲ್ಲ: ಪ್ರಹ್ಲಾದ್ ಜೋಶಿ
ಧಾರವಾಡ ಕ್ಷೇತ್ರದಿಂದ ಪ್ರಹ್ಲಾದ್ ಜೋಶಿ ಅವರನ್ನು ಬದಲಿಸಲು ಬಿಜೆಪಿಗೆ ಗಡುವು ನೀಡಿದ್ದ ದಿಂಗಾಲೇಶ್ವರ ಸ್ವಾಮೀಜಿ
ಹುಬ್ಬಳ್ಳಿ: ದಿಂಗಾಲೇಶ್ವರ ಸ್ವಾಮೀಜಿ ಹಾಗೂ ಶಿರಹಟ್ಟಿ ಪೀಠ ನನಗೆ ಸದಾಕಾಲ ಆಶೀರ್ವಾದ ಮಾಡಿದೆ. ಸ್ವಾಮೀಜಿಗಳಿಗೆ ತಪ್ಪು ತಿಳುವಳಿಕೆಯಾಗಿದ್ದರೆ ಕ್ಷಮೆ ಕೇಳಲು ನಾನು ಹಿಂಜರಿಯಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಲೋಕಸಭಾ ಸದಸ್ಯನಾದ ಮೇಲೆ ಕ್ಷೇತ್ರದಲ್ಲಿ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಏಳು ಜನ ಲಿಂಗಾಯತರಿಗೆ ಟಿಕೆಟ್ ಕೊಡಲಾಗಿದೆ. ಎಲ್ಲಾ ಸಮುದಾಯಕ್ಕೂ ನಾವು ಅವಕಾಶ ಕೊಟ್ಟಿದ್ದೇವೆ. ದಿಂಗಾಲೇಶ್ವರ ಸ್ವಾಮೀಜಿಗಳ ಬಗ್ಗೆ ನನಗೆ ಗೌರವ, ಶ್ರದ್ಧೆ ಇದೆ ಎಂದರು.
ಬಿಜೆಪಿ ಮತ್ತು ಜೆಡಿಎಸ್ ಪ್ರಮುಖರು, ಕಾರ್ಯಕರ್ತರು ಸೇರಿ ಚುನಾವಣೆ ಮಾಡುತ್ತಿದ್ದೇವೆ. ಕ್ಷೇತ್ರದಾದ್ಯಂತ ದೊಡ್ಡ ಸಂಖ್ಯೆಯಲ್ಲಿ ಮತದಾರರನ್ನು ಭೇಟಿಯಾಗುತ್ತೇವೆ. ದೊಡ್ಡ ಬಹುಮತದಿಂದ ಬಿಜೆಪಿ ಗೆಲ್ಲಲಿದೆ. ಈ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಎಲ್ಲ ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.
Next Story