ಪತ್ನಿಯಿಂದ ಕಿರುಕುಳ ಆರೋಪ: ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆಗೈದ ಪತಿ

PC: x.com/ndtvindia
ಹುಬ್ಬಳ್ಳಿ: ಪತ್ನಿ ಕಿರುಕುಳ ನೀಡುತ್ತಿದ್ದಾಳೆ ಎಂಬ ಡೆತ್ನೋಟ್ ಬರೆದಿಟ್ಟ 40 ವರ್ಷದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಚಾಮುಂಡೇಶ್ವರಿ ನಗರದಲ್ಲಿ ಬೆಳಕಿಗೆ ಬಂದಿದೆ. ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಪೆಟಾರು ಗೊಲ್ಲಪಲ್ಲಿ ಎಂಬ ವ್ಯಕ್ತಿ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪೊಲೀಸರು ಸೋಮವಾರ ಪ್ರಕಟಿಸಿದ್ದಾರೆ.
ಎರಡು ವರ್ಷ ಹಿಂದೆ ವಿವಾಹವಾಗಿದ್ದ ಇವರು ಮದುವೆಯಾದ ಮೂರೇ ತಿಂಗಳಲ್ಲಿ ಪರಸ್ಪರ ಜಗಳವಾಡಿಕೊಂಡು ಪ್ರತ್ಯೇಕವಾಗಿ ವಾಸವಿದ್ದರು. ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ಪತ್ನಿ 20 ಲಕ್ಷ ರೂಪಾಯಿ ಜೀವನಾಂಶ ಕೋರಿದ್ದಳು. ಈ ಮಧ್ಯೆ ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಮೂರು ತಿಂಗಳ ಹಿಂದೆ ಉದ್ಯೋಗ ಕಳೆದುಕೊಂಡಿದ್ದ.
ಸಂತ್ರಸ್ತ ವ್ಯಕ್ತಿಯ ಸಹೋದರ ಈಶಯ್ಯ ಸುದ್ದಿಗಾರರೊಂದಿಗೆ ಮಾತನಾಡಿ, ಭಾನುವಾರ ಎಲ್ಲರೂ ಚರ್ಚ್ ಗೆ ತೆರಳಿದ ಬಳಿಕ ಸಹೋದರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಾವಿಗೆ ಪತ್ನಿಯೇ ಕಾರಣ ಎಂದು ಆತ್ಮಹತ್ಯೆ ಟಿಪ್ಪಣಿಯಲ್ಲಿ ಆಪಾದಿಸಲಾಗಿದೆ. "ಡ್ಯಾಡಿ ಕ್ಷಮಿಸಿ...ಪತ್ನಿ ನನ್ನನ್ನು ಕೊಲ್ಲುತ್ತಿದ್ದಾಳೆ. ನನ್ನ ಸಾವನ್ನು ಆಕೆ ಬಯಸಿದ್ದಾಳೆ" ಎಂದು ಡೆತ್ನೋಟ್ ನಲ್ಲಿ ಉಲ್ಲೇಖಿಸಲಾಗಿದೆ ಎಂದು ವಿವರಿಸಿದರು.
"ನನ್ನ ಸಹೋದರನಿಗೆ ನ್ಯಾಯ ಬೇಕು. ಮಹಿಳೆಯನ್ನು ಬಂಧಿಸಬೇಕು. ನನ್ನ ಸಹೋದರನ ಕಷ್ಟ ಯಾರಿಗೂ ಬರಬಾರದು. ಆಕೆಯ ಅಣ್ಣ ನನ್ನ ಸಹೋದರನನ್ನು ಥಳಿಸಿದ ಬಗ್ಗೆ ಪೊಲೀಸರಿಗೂ ವರದಿ ಮಾಡಲಾಗಿತ್ತು" ಎಂದು ಈಶಯ್ಯ ವಿವರಿಸಿದರು. ಈಶಯ್ಯ ನೀಡಿದ ದೂರಿನ ಹಿನ್ನೆಲೆಯಲ್ಲಿ ಮಹಿಳೆಯ ವಿರುದ್ಧ ಭಾರತೀಯ ನ್ಯಾಯಸಂಹಿತೆ ಸೆಕ್ಷನ್ 108 (ಆತ್ಮಹತ್ಯೆಗೆ ಕುಮ್ಮಕ್ಕು) ಅನ್ವಯ ಪ್ರಕರಣ ದಾಖಲಿಸಲಾಗಿದೆ.