ಹುಬ್ಬಳ್ಳಿ ಗ್ಯಾಸ್ ಸಿಲಿಂಡರ್ ಸ್ಫೋಟ ಪ್ರಕರಣ: ಗಾಯಾಳು ಬಾಲಕ ಮೃತ್ಯು: ಮೃತರ ಸಂಖ್ಯೆ 3ಕ್ಕೆ ಏರಿಕೆ
ಹುಬ್ಬಳ್ಳಿ: ಇಲ್ಲಿನ ಉಣಕಲ್ ನ ಅಚ್ಚವ್ವ ಕಾಲನಿಯ ಈಶ್ವರ ದೇವಸ್ಥಾನದಲ್ಲಿ ಕಳೆದ ರವಿವಾರ ರಾತ್ರಿ ಸಂಭವಿಸಿದ ಗ್ಯಾಸ್ ಸಿಲಿಂಡರ್ ಸ್ಫೋಟದಲ್ಲಿ ಗಂಭೀರ ಗಾಯಗೊಂಡಿದ್ದ ಬಾಲಕ ಇಂದು ಬೆಳಗ್ಗೆ ಮೃತಪಟ್ಟಿದ್ದಾನೆ. ಇದರೊಂದಿಗೆ ಈ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೇರಿದೆ.
ಉಣಕಲ್ ಸುಬಾನಿ ನಗರ ನಿವಾಸಿ ರಾಜು ಕೃಷ್ಣ ಮುಗೇರಿ (16) ಮೃತ ಬಾಲಕ. ಆತ ಇಂದು ಬೆಳಗ್ಗೆ 8:05ರ ಸುಮಾರಿಗೆ ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾನೆ. ಈತ ಇಲ್ಲಿನ ವಿದ್ಯಾನಗರ ಕಟ್ಟಿಮನಿ ಶಾಲೆಯ ವಿದ್ಯಾರ್ಥಿಯಾಗಿದ್ದ.
ಈಶ್ವರ ದೇವಸ್ಥಾನ ಬಳಿಯ ಕಟ್ಟಡದ ಮೇಲಂತಸ್ತಿನಲ್ಲಿ ತಂಗಿದ್ದ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ರವಿವಾರ ರಾತ್ರಿ ಮಲಗಿದ್ದ ವೇಳೆ ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ಸ್ಫೋಟ ಸಂಭವಿಸಿತ್ತು. ಈ ವೇಳೆ ಬಾಲಕ ಸೇರಿ ಒಂಭತ್ತು ಮಾಲಾಧಾರಿಗಳು ಗಂಭೀರವಾಗಿ ಗಾಯಗೊಂಡಿದ್ದರು. ಈ ಪೈಕಿ ಕೆಎಂಸಿಆರ್ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರಲ್ಲಿ ನಿಜಲಿಂಗಪ್ಪ ಬೇಪುರಿ ( 58) ಹಾಗೂ ಸಂಜಯ ಸವದತ್ತಿ (18) ಗುರುವಾರ ಬೆಳಗಿನ ಜಾವ ಮೃತಪಟ್ಟಿದ್ದರು.
ಇದುವರೆಗೆ ಈ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೇರಿದೆ. ಗಾಯಾಳುಗಳ ಪೈಕಿ ಐವರ ಸ್ಥಿತಿಯು ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.