ಹುಬ್ಬಳ್ಳಿ | ಬಾಲಕಿಯ ಹತ್ಯೆ ಪ್ರಕರಣ : ಪೊಲೀಸ್ ಗುಂಡೇಟಿಗೆ ಆರೋಪಿ ಬಲಿ
ಸಾಂದರ್ಭಿಕ ಚಿತ್ರ | PC : ANI
ಹುಬ್ಬಳ್ಳಿ : ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕತ್ತು ಹಿಸುಕಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಮೂಲದ ಆರೋಪಿಯು ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ.
ರಿತೇಶ್ ಕುಮಾರ್ ಪೊಲೀಸರ ಗುಂಡೇಟಿಗೆ ಬಲಿಯಾದ ಆರೋಪಿ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಪೊಲೀಸರು ಆರೋಪಿಯನ್ನು ಬಂಧಿಸಲು ಹೋದಾಗ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಆತ್ಮರಕ್ಷಣೆಗಾಗಿ ಆರೋಪಿ ಮೇಲೆ ಗುಂಡು ಹಾರಿಸಿದ್ದಾರೆ. ಪರಿಣಾಮ ಎದೆಗೆ ಗುಂಡು ತಗುಲಿ ಆರೋಪಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಮೂವರು ಪೊಲೀಸರಿಗೆ ಗಾಯ: ರಿತೇಶ್ ಕುಮಾರ್ ಹಲವಾರು ತಿಂಗಳಿನಿಂದ ಹುಬ್ಬಳ್ಳಿಯಲ್ಲಿ ನೆಲೆಸಿದ್ದ. ದೃಶ್ಯಗಳನ್ನು ಆಧರಿಸಿ ತನಿಖೆ ನಡೆಸಲಾಗಿತ್ತು. ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಲು ಹೋಗಿದ್ದ ವೇಳೆ ಪೊಲೀಸರ ಮೇಲೆ ಕಲ್ಲು ತೂರಿ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಪಿಎಸ್ಸೈ ಅನ್ನಪೂರ್ಣ ಅವರು ಫೈರಿಂಗ್ ಮಾಡಿದ್ದಾರೆ. ಘಟನೆಯಲ್ಲಿ ಅನ್ನಪೂರ್ಣ ಸೇರಿದಂತೆ ಮೂವರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಹುಬ್ಬಳ್ಳಿ ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.
ರವಿವಾರ ಹುಬ್ಬಳ್ಳಿಯ ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಮಹಿಳೆಯೊಬ್ಬರ ಐದು ವರ್ಷದ ಮಗುವನ್ನು ದುಷ್ಕರ್ಮಿಯೊಬ್ಬ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿಗಿ, ಕುತ್ತಿಗೆ ಹಿಸುಕಿ ಕೊಲೆಗೈದಿರುವ ಘಟನೆ ಬೆಳಕಿಗೆ ಬಂದಿತ್ತು.
ಈ ಘಟನೆಗೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡ, ರಿತೇಶ್ ನನ್ನು ಬಂಧಿಸಲು ತೆರಳಿದಾಗ ಪೊಲೀಸರಿಂದ ತಪ್ಪಿಸಿಕೊಳ್ಳಲು ಹಲ್ಲೆಗೆ ಮುಂದಾಗಿದ್ದನು. ಈ ವೇಳೆ ಪೊಲೀಸರು ನಡೆಸಿದಂತ ಗುಂಡಿನ ದಾಳಿಯಲ್ಲಿ ಆರೋಪಿ ಮೃತಪಟಿದ್ದಾನೆ.
ಕುಟುಂಬಕ್ಕೆ ಸರಕಾರದಿಂದ 10 ಲಕ್ಷ ರೂ. ಪರಿಹಾರ :
ಮೃತ ಬಾಲಕಿಯ ಕುಟುಂಬಕ್ಕೆ ಸರಕಾರದಿಂದ ಪರಿಹಾರ ಘೋಷಣೆ ಮಾಡಲಾಗಿದ್ದು,10 ಲಕ್ಷ ರೂ. ಪರಿಹಾರ ನೀಡುವುದಾಗಿ ಸರಕಾರದ ಪರವಾಗಿ ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಮ್ ಅಹ್ಮದ್ ಮಾಹಿತಿ ನೀಡಿದ್ದಾರೆ.