ಹುಬ್ಬಳ್ಳಿ | ಯುವಕನ ಹತ್ಯೆ ಪ್ರಕರಣ: ಮೂವರು ಆರೋಪಿಗಳ ಕಾಲಿಗೆ ಗುಂಡಿಕ್ಕಿ ಬಂಧನ
ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಸೆರೆ ಹಿಡಿದ ಪೊಲೀಸರು

ಕೊಲೆಯಾದ ಆಕಾಶ್ ( ಎಡದಿಂದ ಮೊದಲ ಚಿತ್ರ). ಯಲ್ಲಪ್ಪ | ಅಭಿಷೇಕ್ | ವಿನೋದ್
ಹುಬ್ಬಳ್ಳಿ: ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಇಲ್ಲಿನ ವಿದ್ಯಾ ನಗರದಲ್ಲಿ ಸೋಮವಾರ ರಾತ್ರಿ ನಡೆದ ಆಕಾಶ್ ವಾಲ್ಮೀಕಿ (22) ಎಂಬ ಯುವಕನ ಹತ್ಯೆ ಪ್ರಕರಣದ ಮೂವರು ಆರೋಪಿಗಳನ್ನು ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಕಾಲಿಗೆ ಗುಂಡಿಕ್ಕಿ ಬಂಧಿಸಿದ್ದಾರೆ.
ಹಳೇಹುಬ್ಬಳ್ಳಿ ಆನಂದ ನಗರದ ಅಭಿಷೇಕ್ ಶಿರೂರ, ಯಲ್ಲಪ್ಪ ಕೋಟಿ ಹಾಗೂ ವಿನೋದ್ ಅಂಬಿಗೇರ ಬಂಧಿತ ಆರೋಪಿಗಳು. ಇವರನ್ನು ಇಂದು ಮುಂಜಾನೆ ವೇಳೆ ಪೊಲೀಸರು ಬಂಧಿಸಿದ್ದಾರೆ. ಬಂಧನಕ್ಕೆ ಮುಂದಾದ ಸಂದರ್ಭದಲ್ಲಿ ಆರೋಪಿಗಳು ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಪೊಲೀಸರು ಮೂವರು ಆರೋಪಿಗಳನ್ನು ಕಾಲಿಗೆ ಗುಂಡಿಕ್ಕಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿದ್ಯಾನಗರದ ಗೋಲ್ಡನ್ ಹೈಟ್ಸ್ ಬಾರ್ ಆ್ಯಂಡ್ ಫ್ಯಾಮಿಲಿ ರೆಸ್ಟೋರೆಂಟ್ನ ಪಾರ್ಕಿಂಗ್ ಜಾಗದಲ್ಲಿ ಹಳೇ ಹುಬ್ಬಳ್ಳಿ ಇಂದ್ರಪ್ರಸ್ಥ ನಗರ ನಿವಾಸಿ ಆಕಾಶ್ ವಾಲ್ಮೀಕಿ ಎಂಬ ಯುವಕನನ್ನು ಸೋಮವಾರ ರಾತ್ರಿ ಮಾರಕಾಯುಧಗಳಿಂದ ಇರಿದು ಕೊಲೆಗೈಯಲಾಗಿದೆ. ಕೊಲೆ ಕೃತ್ಯದ ಬಳಿಕ ಆರೋಪಿಗಳು ಎಂಟಿಎಸ್ ಕಾಲನಿಯಲ್ಲಿ ಅಡಗಿರುವುದನ್ನು ಮನಗಂಡ ಪೊಲೀಸರು ಅವರ ಬಂಧನಕ್ಕೆ ಮುಂದಾಗಿದ್ದಾರೆ. ಈ ವೇಳೆ ಆರೋಪಿಗಳು ಪೊಲೀಸರ ಮೇಲೆ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ್ದಾರೆ. ಆಗ ಪೊಲೀಸರು ಮೂವರ ಕಾಲಿಗೆ ಗುಂಡಿಕ್ಕಿ ವಶಕ್ಕೆ ಪಡೆದು ಬಂಧಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.
ಘಟನೆಯಲ್ಲಿ ನಾಲ್ವರು ಪೊಲೀಸರು ಕೂಡಾ ಗಾಯಗೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ಹಾಗೂ ಗಾಯಾಳು ಪೊಲೀಸರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಭೇಟಿ ನೀಡಿರುವ ಪೊಲೀಸರು ಆಯುಕ್ತರು ಪೊಲೀಸರ ಆರೋಗ್ಯ ವಿಚಾರಿಸಿದರು. ಆರೋಪಿಗಳ ಬಗ್ಗೆ ಮಾಹಿತಿ ಪಡೆದರು.
ಮೃತ ಆಕಾಶ್ ಕೂಡಾ ಪ್ರಕರಣವೊಂದರ ಆರೋಪಿಯಾಗಿದ್ದಾನೆ. ಕೊಲೆ ಆರೋಪಿಗಳು ಮತ್ತು ಆಕಾಶ್ ತಂಡದ ಮಧ್ಯೆ ಆಗಾಗ್ಗೆ ಜಗಳಗಳು ನಡೆಯುತ್ತಿದ್ದವು. ಕಳೆದ ಶಿವರಾತ್ರಿ ದಿನವೂ ಇವರೊಳಗೆ ಗಲಾಟೆ ನಡೆದಿತ್ತು. ಅದೇ ದ್ವೇಷದ ಹಿನ್ನೆಲೆಯಲ್ಲಿ ವ್ಯವಸ್ಥಿತ ಸಂಚು ನಡೆಸಿ ಆಕಾಶ್ ನನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಸದ್ಯ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದವರ ಬಂಧನಕ್ಕೆ ಜಾಲ ಬೀಸಿದ್ದೇವೆ ಎಂದವರು ತಿಳಿಸಿದ್ದಾರೆ.