ಹುಬ್ಬಳ್ಳಿ: ನಿರ್ಮಾಣ ಹಂತದ ಕಟ್ಟಡದ ವಾಚ್ ಮ್ಯಾನ್ ಮೃತದೇಹ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆ
ಸಾಂದರ್ಭಿಕ ಚಿತ್ರ
ಹುಬ್ಬಳ್ಳಿ, ಸೆ.28: ಹುಬ್ಬಳ್ಳಿಯ ಸಿಲ್ವರ್ ಟೌನ್ ನಲ್ಲಿರುವ ನಿರ್ಮಾಣ ಹಂತದ ಕಟ್ಟಡವೊಂದರ ವಾಚ್ ಮ್ಯಾನ್ ಮೃತದೇಹ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಇಲ್ಲಿನ ಅಪೂರ್ವ ನಗರದಿಂದ ವರದಿಯಾಗಿದೆ.
ಮೃತರನ್ನು ಮೂಲತಃ ಗದಗ ಜಿಲ್ಲೆಯ ಲಕ್ಷ್ಮೇಶ್ವರ ನಿವಾಸಿ ಪರಸಪ್ಪ(50) ಎಂದು ಗುರುತಿಸಲಾಗಿದೆ. ಇವರು ಹುಬ್ಬಳ್ಳಿಯ ಸಿಲ್ವರ್ ಟೌನ್ ನಲ್ಲಿ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ವಾಚ್ ಮ್ಯಾನ್ ಆಗಿದ್ದು, ಕುಟುಂಬ ಸಮೇತ ಅಲ್ಲಿಯೇ ವಾಸವಿದ್ದರು.
ನಿರ್ಮಾಣ ಹಂತದ ಈ ಕಟ್ಟಡದಲ್ಲಿ ಬುಧವಾರ ಕಾರ್ಮಿಕ, ಉತ್ತರ ಕನ್ನಡ ಜಿಲ್ಲೆಯ ಮುಂಡಗೊಡ ತಾಲೂಕಿನ ಮರಗಡಿ ನಿವಾಸಿ ಮೌಲಾಲಿ ಎಂಬ ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಪೊಲೀಸರು ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದರು. ಈ ನಡುವೆ ಪರಸಪ್ಪ ಪರಸಪ್ಪನ ಮೃತದೇಹ ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಅಪೂರ್ವ ನಗರದ ಪ್ರಮುಖ ರಸ್ತೆಯಲ್ಲಿ ಪತ್ತೆಯಾಗಿದೆ.
ಮೌಲಾಲಿ ಕೊಲೆಗೂ ಪರಸಪ್ಪರ ಆತ್ಮಹತ್ಯೆಗೂ ಸಂಬಂಧ ಇದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.