ಬಿಜೆಪಿ ದೃಷ್ಟಿಯಲ್ಲಿ ದಲಿತರು ಶ್ವಾನಕ್ಕೆ ಸಮಾನ ಎನ್ನುವಂತಾಗಿದೆ: ಜಿಗ್ನೇಶ್ ಮೇವಾನಿ
ಹುಬ್ಬಳ್ಳಿ: ದಲಿತ ಸಮುದಾಯದ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಯುವಲ್ಲಿ ಕೇಂದ್ರ ಸರಕಾರ ಸಂಪೂರ್ಣ ವಿಫಲವಾಗಿದ್ದು, ಬಿಜೆಪಿ ದೃಷ್ಟಿಯಲ್ಲಿ ದಲಿತರು ನಾಯಿ(ಶ್ವಾನ)ಗೆ ಸಮಾನ ಎನ್ನುವಂತಾಗಿದೆ ಎಂದು ಗುಜರಾತ್‍ನ ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿ ಎಂದು ಟೀಕಿಸಿದ್ದಾರೆ.
ಸೋಮವಾರ ನಗರದ ನೆಹರು ಮೈದಾನದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ವಿಶ್ವಮಾನವರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದಲಿತರ ಹತ್ಯೆಗಳು, ದೌರ್ಜನ್ಯ ನಿರಂತವಾಗಿ ಸಾಗಿದರೂ ಕೇಂದ್ರ ಸರಕಾರ ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ. ಜತೆಗೆ, ಕೇಂದ್ರದ ಸಚಿವರೊಬ್ಬರು ಪರೋಕ್ಷವಾಗಿ ದಲಿತರನ್ನು ನಾಯಿಗೆ ಹೊಲಿಕೆ ಮಾಡಿರುವ ಜೀವಂತ ಸಾಕ್ಷ್ಯವಿದೆ ಎಂದು ಹೇಳಿದರು.
ಹೊಸದಿಲ್ಲಿಯಲ್ಲಿ ಬಿಜೆಪಿ ನಾಯಕರು ಸಂವಿಧಾನದ ಪ್ರತಿ ಸುಟ್ಟರು. ಈ ವೇಳೆ ಪ್ರಧಾನಿ ಮೋದಿ ಮಾತನಾಡಲಿಲ್ಲ. ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಸಂವಿಧಾನ ಬದಲಾವಣೆ ಮಾಡೋದಾಗಿ ಹೇಳಿದರು. ನಾಯಿ ಬೊಗಳುತ್ತಿರುತ್ತೆ ನಾವು ತಲೆ ಕೆಡಿಸಿಕೊಳ್ಳಲ್ಲ ಅಂದರು. ಇದೆಲ್ಲ ನೋಡಿದಾಗ ಬಿಜೆಪಿ ದೃಷ್ಟಿಯಲ್ಲಿ ದಲಿತರು ನಾಯಿಗೆ ಸಮಾನ ಎನ್ನುವಂತಾಗಿದೆ. ಹೀಗಾಗಿ ಈ ಕೇಂದ್ರ ಸರಕಾರವನ್ನು ಕಿತ್ತು ಹಾಕಬೇಕು ಎಂದು ನುಡಿದರು.
ಕೆಲಸ ಅಂಕಿ-ಅಂಶಗಳ ಪ್ರಕಾರ ಒಂದು ಲಕ್ಷಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರಗಳಾಗಿವೆ. ಈ ಪಟ್ಟಿಯಲ್ಲಿ ದಲಿತ ಮತ್ತು ಆದಿವಾಸಿಗಳ ಸಂಖ್ಯೆ ಹೆಚ್ಚಿದೆ. ಅದಕ್ಕೆ ಅನುಗುಣವಾಗಿ ಅವರಿಗೆ ನ್ಯಾಯ, ಸೌಲಭ್ಯಗಳು ಸಿಕ್ಕಿಲ್ಲ. ಎಲ್ಲ ರಂಗಗಳಲ್ಲಿಯೂ ದಲಿತ, ಆದಿವಾಸಿಗಳು ಹಿಂದಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಜಾತಿ ಜನಗಣತಿ ಬಗ್ಗೆ ಮಾತನಾಡುತ್ತಿದ್ದು, ಈ ಮೂಲಕ ನ್ಯಾಯ ಒದಗಿಸಲು ನಾವು ಬದ್ಧವಾಗಿದ್ದೇವೆ ಎಂದರು.