ತಮ್ಮ ಮತ ಬ್ಯಾಂಕಿಗಾಗಿ ಕರ್ನಾಟಕದ ಸುರಕ್ಷತೆಗೆ ಧಕ್ಕೆ ತರುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ : ಅಮಿತ್ ಶಾ
ಅಮಿತ್ ಶಾ | PC : PTI
ಬೆಂಗಳೂರು : ತಮ್ಮ ಮತಬ್ಯಾಂಕಿಗಾಗಿ ಕರ್ನಾಟಕ ಸುರಕ್ಷತೆಗೆ ಧಕ್ಕೆ ತರುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಟೀಕಿಸಿದ್ದಾರೆ.
ಧಾರವಾಡ ಲೋಕಸಭಾ ಕ್ಷೇತ್ರದ ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಇಂದು ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷಣ ಮಾಡಿದ ಅವರು, "ದೇಶ ಸುರಕ್ಷತೆಗೆ ಶ್ರಮಿಸುವ ನರೇಂದ್ರ ಮೋದಿ ಮತ್ತು ದೇಶವಿರೋಧಿಗಳನ್ನು ಬೆಂಬಲಿಸುವ ಕಾಂಗ್ರೆಸ್ ಪಕ್ಷದ ನಡುವೆ ಒಬ್ಬರನ್ನು ಕರ್ನಾಟಕದ ಮತದಾರರು ಆಯ್ಕೆ ಮಾಡಬೇಕು" ಎಂದು ತಿಳಿಸಿದರು.
ಪ್ರಹ್ಲಾದ್ ಜೋಶಿಯವರಿಗೆ ನೀಡಿದ ಪ್ರತಿ ಮತವು ಮೋದಿಯವರ ಕೈಗಳನ್ನು ಬಲಪಡಿಸಲಿದೆ ಹಾಗೂ ನಕ್ಸಲ್ವಾದ, ಆತಂಕವಾದವನ್ನು ಅಂತ್ಯಗೊಳಿಸಲಿದೆ. ಹಾಗೂ ಭಾರತವನ್ನು ವಿಶ್ವದ ಮೂರನೇ ಆರ್ಥಿಕ ಶಕ್ತಿಯಾಗಿ ಮಾರ್ಪಡಿಸಲಿದೆ ಎಂದರು.
ಕಾಂಗ್ರೆಸ್ ಪಕ್ಷಕ್ಕೆ ಪಾಠ ಕಲಿಸಲು ಎಲ್ಲ 28 ಕ್ಷೇತ್ರಗಳಲ್ಲಿ ಎನ್ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸಿ ನರೇಂದ್ರ ಮೋದಿಯವರ ಕೈಗಳನ್ನು ಬಲಪಡಿಸಿ. ಕಾಶ್ಮೀರವೇ ಇರಲಿ, ಕನ್ಯಾಕುಮಾರಿ, ಬಂಗಾಲ, ಗುಜರಾತ್, ಮಧ್ಯಪ್ರದೇಶ, ಉತ್ತರಪ್ರದೇಶ, ಕರ್ನಾಟಕ ಸೇರಿ ಎಲ್ಲೆಡೆ ಮೋದಿ ಮೋದಿ ಎಂಬ ಘೋಷಣೆ ಕೇಳಿಸುತ್ತಿದೆ ಎಂದರು.
ದೇಶದ ನಾಲ್ಕೂ ದಿಕ್ಕಿನಲ್ಲಿ ನರೇಂದ್ರ ಮೋದಿಯವರನ್ನು ಗೆಲ್ಲಿಸುವ ದೃಢಸಂಕಲ್ಪ ಕೇಳಿಸುತ್ತಿದೆ. ನಾನು ಇಲ್ಲಿ ಪ್ರಹ್ಲಾದ್ ಜೋಶಿ ಅವರನ್ನು ಗೆಲ್ಲಿಸಲು ಮನವಿ ಮಾಡಲು ಬಂದಿಲ್ಲ. ಜೋಶಿಯವರನ್ನು ಗರಿಷ್ಠ ಮತಗಳ ಅಂತರದಿಂದ ಗೆಲ್ಲಿಸಬೇಕು. ಮುಂದಿನ ಬಾರಿ ಅವರ ವಿರುದ್ಧ ಯಾರೂ ಸ್ಪರ್ಧಾ ಕಣಕ್ಕೆ ಇಳಿಯದಂತೆ ನೋಡಿಕೊಳ್ಳಿ ಎಂದು ವಿನಂತಿಸಿದರು.