ʼಗ್ಯಾರಂಟಿʼಗಳ ಹೆಸರಿನಲ್ಲಿ ರಾಜ್ಯದ ಆರ್ಥಿಕ ವ್ಯವಸ್ಥೆ, ಅಭಿವೃದ್ಧಿಯನ್ನು ಹಾಳು ಮಾಡಿದ್ದಾರೆ : ಕುಮಾರಸ್ವಾಮಿ

ಎಚ್.ಡಿ.ಕುಮಾರಸ್ವಾಮಿ
ಹುಬ್ಬಳ್ಳಿ: ಸತತ ಮೂರು ವಿಧಾನಸಭೆ ಚುನಾವಣೆಗಳಲ್ಲಿಯೂ ದೆಹಲಿಯಲ್ಲಿ ಶೂನ್ಯ ಸಾಧನೆ ಮಾಡಿರುವ ಕಾಂಗ್ರೆಸ್ ಇನ್ನಾದರೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಅವರು ಕಿವಿಮಾತು ಹೇಳಿದರು.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ನಾಯಕರು ಹೇಗೆ ವರ್ತನೆ ಮಾಡುತ್ತಿದ್ದಾರೆ ಎಂಬುದನ್ನು ಜನ ನೋಡುತ್ತಿದ್ದಾರೆ. ದೆಹಲಿ ಫಲಿತಾಂಶದ ಬಗ್ಗೆ ಈಗಲಾದರೂ ಅವಲೋಕನ ಮಾಡಿಕೊಳ್ಳುವುದು ಉಚಿತ. ದೇಶದಲ್ಲಿ ತಾವು ಯಾವ ಸ್ಥಿತಿಯಲ್ಲಿದ್ದೇವೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಗ್ಯಾರಂಟಿಗಳ ಹೆಸರಿನಲ್ಲಿ ರಾಜ್ಯದ ಆರ್ಥಿಕ ವ್ಯವಸ್ಥೆಯನ್ನು, ರಾಜ್ಯದ ಅಭಿವೃದ್ಧಿಯನ್ನು ಹಾಳು ಮಾಡುತ್ತಿರುವ ಆ ಪಕ್ಷಕ್ಕೆ ರಾಜ್ಯದಲ್ಲಿಯೂ ತಕ್ಕಪಾಠ ಕಲಿಸಲಿದ್ದಾರೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ದೆಹಲಿಯಲ್ಲಿ ಮತದಾರರು ಕಳೆದ ಹತ್ತು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶದಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳನ್ನು ನೋಡಿ ಮತ ಹಾಕಿದ್ದಾರೆ. ಭ್ರಷ್ಟಾಚಾರವನ್ನು ಸೋಲಿಸಿ ಅಭಿವೃದ್ಧಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ಮೂಲೆಗೆ ತಳ್ಳಿದ್ದಾರೆ. ಇದನ್ನು ನೋಡಿದರೆ, ದೇಶ ರಾಜಕಾರಣ ಯಾವ ದಿಕ್ಕಿನಲ್ಲಿದೆ ಎಂಬುದು ಅರ್ಥವಾಗುತ್ತದೆ ಎಂದು ಸಚಿವರು ಹೇಳಿದರು.
ಬಿಜೆಪಿ ಬಿಕ್ಕಟ್ಟು ಸರಿ ಹೋಗುತ್ತದೆ:
ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಚಿವರು, ಅವರ ಪಕ್ಷದಲ್ಲಿ ಆಗುತ್ತಿರುವ ಘಟನೆಗಳ ಬಗ್ಗೆ ನಾನು ಮಾತನಾಡಿದರೆ ತಪ್ಪಾಗುತ್ತದೆ. ಸರಿ ಮಾಡಿಕೊಳ್ಳಿ ಎಂದು ಸ್ನೇಹಿತರಿಗೆ ಹೇಳಿದ್ದೇನೆ. ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದು, ಬಲಿಷ್ಠ ನಾಯಕತ್ವವನ್ನು ಹೊಂದಿದೆ. ಹೀಗಾಗಿ ಶೀಘ್ರವೇ ಎಲ್ಲವೂ ಸರಿ ಹೋಗುತ್ತದೆ ಎನ್ನುವ ನಿರೀಕ್ಷೆ ನನ್ನಲ್ಲಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.