ಬಿಜೆಪಿಯವರು ಮಹಾದಾಯಿ ಯೋಜನೆಗಾಗಿ ಜನಜಾಗೃತಿ ಮಾಡಲಿ : ಸಿ.ಎಂ.ಇಬ್ರಾಹೀಂ
ಸಿ.ಎಂ.ಇಬ್ರಾಹೀಂ
ಹುಬ್ಬಳ್ಳಿ : ಬಿಜೆಪಿಯವರು ವಕ್ಫ್ ವಿಚಾರದಲ್ಲಿ ಜನಜಾಗೃತಿ ಸಮ್ಮೇಳನ ಮಾಡುವ ಬದಲು ಮಹಾದಾಯಿ ಯೋಜನೆಗಾಗಿ ಮಾಡಲಿ ಎಂದು ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹೀಂ ಹೇಳಿದರು.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕ್ಫ್ ವಿಚಾರದಲ್ಲಿ ಬಿಜೆಪಿಯವರು ಗೊಂದಲ ಸೃಷ್ಠಿ ಮಾಡುತ್ತಿದ್ದಾರೆ. ರಾಮ, ಮಂದಿರ, ಮಸೀದಿ ಎಲ್ಲ ಮುಗಿಯಿತು. ಈಗ ಮತಗಳಿಕೆಗಾಗಿ ವಕ್ಫ್ ವಿಚಾರವನ್ನು ಹಿಡಿದುಕೊಂಡಿದ್ದಾರೆ ಎಂದು ಟೀಕಿಸಿದರು.
ವಕ್ಫ್ ಕಾಯ್ದೆಯನ್ನು ಕಾಂಗ್ರೆಸ್ ಸರಕಾರ ಜಾರಿ ಮಾಡಿಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರು ಜಾರಿ ಮಾಡಿದ್ದು. ಬಿಜೆಪಿಯವರಿಗೆ ಇತಿಹಾಸ ಗೊತ್ತಿಲ್ಲ. ವಕ್ಫ್ ಅದಾಲತ್ ಅನ್ನು ಮಾಡಲು ಹೋಗಿ ಸಚಿವ ಝಮೀರ್ ಅಹ್ಮದ್ ಖಾನ್ ಅನಗತ್ಯ ವಿವಾದವನ್ನು ತಮ್ಮ ಮೇಲೆ ಹಾಕಿಕೊಂಡಿದ್ದಾರೆ ಎಂದು ಇಬ್ರಾಹೀಂ ಹೇಳಿದರು.
ನಾನು ರೈತ ನಾಯಕರು, ಮಾಜಿ ಐಎಎಸ್ ಅಧಿಕಾರಿಗಳ ಜೊತೆ ರೈತರ ಬಳಿ ಹೋಗುತ್ತೇನೆ. ಅವರ ದಾಖಲೆಗಳನ್ನು ಪರಿಶೀಲಿಸುತ್ತೇನೆ. ಪಹಣಿ ಯಾರ ಹೆಸರಿನಲ್ಲಿದೆಯೋ ಅವರಿಗೆ ಆ ಭೂಮಿಯನ್ನು ಕೊಡಿಸಲು ಪ್ರಯತ್ನಿಸುತ್ತೇನೆ. ವಕ್ಫ್ ಅಂದರೆ ದಾನ, ಕಸಿಯುವುದಲ್ಲ ಎಂದು ಅವರು ತಿಳಿಸಿದರು.
ರಾಜ್ಯ ರಾಜಕಾರಣ ಹೊಲಸು ಎದ್ದು ಹೋಗಿದೆ. ಒಂದು ಕಡೆ ವಿಜಯೇಂದ್ರ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ನಡುವಿನ ಗಲಾಟೆಯಿಂದ ಜನರು ಬೇಸತ್ತು ಹೋಗಿದ್ದಾರೆ. ವಿಜಯೇಂದ್ರ ತಮ್ಮ ಪಕ್ಷದಲ್ಲಿರುವ ಆಂತರಿಕ ಜಗಳವನ್ನು ಮುಚ್ಚಿ ಹಾಕಿಕೊಳ್ಳಲು ಮುಸ್ಲಿಮರನ್ನು ಮಧ್ಯೆ ತರಬೇಡಿ ಎಂದು ಇಬ್ರಾಹೀಂ ಹೇಳಿದರು.
ಬಿಜೆಪಿಯಿಂದ ಬಸನಗೌಡ ಪಾಟೀಲ್ ಯತ್ನಾಳ್ಗೆ ಶೋಕಾಸ್ ನೋಟಿಸ್ ನೀಡುವುದರಿಂದ ಏನು ಆಗಲ್ಲ. ಯತ್ನಾಳ್ ಬಿಜೆಪಿ ಬಿಟ್ಟರೂ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದು ಅವರು ಅಭಿಪ್ರಾಯಪಟ್ಟರು.