ಲೋಕಾಯುಕ್ತ ಕಾಂಗ್ರೆಸ್ ಸರಕಾರಕ್ಕೆ ಸಂಪೂರ್ಣ ಶರಣಾಗಿದೆ : ಪ್ರಹ್ಲಾದ್ ಜೋಶಿ ಆರೋಪ
ಹುಬ್ಬಳ್ಳಿ : ರಾಜ್ಯದಲ್ಲಿ ಲೋಕಾಯುಕ್ತ ತನಿಖಾ ಸಂಸ್ಥೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಆಡಳಿತರೂಢ ಕಾಂಗ್ರೆಸ್ ಸರಕಾರಕ್ಕೆ ಸಂಪೂರ್ಣ ಶರಣಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದರು.
ಸೋಮವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತ ಹಿಂದಿನಂತೆ ಖಡಕ್ ತನಿಖಾ ಸಂಸ್ಥೆಯಾಗಿ ಉಳಿದಿಲ್ಲ. ಬದಲಿಗೆ ಕಾಂಗ್ರೆಸ್ ಆಯುಕ್ತವಾಗಿದೆ. ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಮತ್ತು ಅವರ ಕುಟುಂಬಕ್ಕೆ ಅನುಕೂಲಕರ ರೀತಿಯಲ್ಲಿ ತನಿಖೆ ನಡೆಯುತ್ತಿದೆ ಎಂದು ದೂರಿದರು.
30 ಲಕ್ಷ ರೂ.ಎಣಿಸುವ ವಿಡಿಯೋ ಸುದ್ದಿ ಮಾಧ್ಯಮವೊಂದರಲ್ಲಿ ಬಿತ್ತರವಾಗಿದೆ. ಇಷ್ಟೊಂದು ದೊಡ್ಡ ಪ್ರಕರಣ ನಡೆದರೂ ಇದುವರೆಗೆ ಯಾರೊಬ್ಬರನ್ನೂ ಬಂಧಿಸಲಾಗಿಲ್ಲ. ವಾಲ್ಮೀಕಿ, ಮುಡಾ ಹೀಗೆ ಸಾಕಷ್ಟು ಹಗರಣ ನಡೆದರೂ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರ ಕೈಹಿಡಿದಿದೆ ಎಂದು ಟೀಕಿಸಿದರು.
ಕೆಳಗಿಳಿಸಲು ನಿರ್ಧಾರ: ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ತೀರ್ಮಾನ ಮಾಡಿದಂತಿದೆ. ಆದರೆ, ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಗುತ್ತಾರೋ ಅಥವಾ ಬೇರೆ ಯಾರೂ ಆಗುತ್ತಾರೆಂಬುದನ್ನು ಈ ಉಪ ಚುನಾವಣೆ ನಿರ್ಧರಿಸಲಿದೆ ಎಂದು ಹೇಳಿದರು.