ಬಿಜೆಪಿಯಿಂದ ಅನೇಕ ಮಂದಿ ಕಾಂಗ್ರೆಸ್ ಗೆ ಬರಲಿದ್ದಾರೆ: ಡಿಸಿಎಂ ಡಿ.ಕೆ.ಶಿವಕುಮಾರ್
ಹುಬ್ಬಳ್ಳಿ: ಕೇವಲ ಇಬ್ಬರು ಮೂವರಲ್ಲ. ಬಿಜೆಪಿಯಿಂದ ಅನೇಕ ಮಂದಿ ಕಾಂಗ್ರೆಸ್ ಗೆ ಸೇರ್ಪಡೆಯಾಗಲಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಬುಧವಾರ ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಮಹದಾಯಿ ವಿಚಾರದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಉತ್ತರ ಕೊಡಬೇಕು. ಇದೇ ಮಹದಾಯಿ ವಿಚಾರ ಇಟ್ಟುಕೊಂಡು ಹುಬ್ಬಳ್ಳಿಯಲ್ಲಿ ವಿಜಯೋತ್ಸವನ್ನು ಅವರು ಮಾಡಿದ್ದರು. ಹಾಗಾದರೆ ಇನ್ನೂ ಯಾಕೆ ಮಹದಾಯಿ ತೊಡಕುಗಳ ನಿವಾರಣೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಿದರೆ ಅವರಿಗೊಂದು ಗೌರವ, ಆದರೆ ಅವರು ಈ ಬಗ್ಗೆ ಚಕಾರ ಎತ್ತುತ್ತಿಲ್ಲ, ಮಹದಾಯಿ ಬಗ್ಗೆ ಅವರು ಉತ್ತರಿಸಲಿ ಎಂದು ಒತ್ತಾಯಿಸಿದರು.
ಎಸ್.ಟಿ.ಸೋಮಶೇಖರ್, ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಸುದ್ದಿಗಾರ ಪ್ರಶ್ನೆಗೆ ಉತ್ತರಿಸಿದ ಅವರು, ಕೇವಲ ಇಬ್ಬರು ಮೂವರಲ್ಲ. ಬಿಜೆಪಿಯಿಂದ ಅನೇಕ ಮಂದಿ ಕಾಂಗ್ರೆಸ್ ಗೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಿದರು.
ಪಾಕ್ ಪರ ಘೋಷಣೆ ವಿಚಾರದಲ್ಲಿ ಸಿಎಂ ಡಿಸಿಎಂ ರಾಜೀನಾಮೆಗೆ ಆಗ್ರಹ ವಿಚಾರವಾಗಿ ಪ್ರತಿಕ್ರಿಯಿಸಿ, ಬಿಜೆಪಿಯವರಿಗೆ ಯಾವಾಗ ಬೇಕಂತೆ ರಾಜೀನಾಮೆ ಕೊಡೋಣ. ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿದ್ದರು. ಅವರನ್ನು ಯಾಕೆ ಬಂಧನ ಮಾಡಲಿಲ್ಲ?. ನಾವು ಘೋಷಣೆ ಕೂಗಿದವರ ವಿಚಾರಣೆ ಮಾಡುತ್ತಿದ್ದೇವೆ. ಬಿಜೆಪಿಯವರು ಕೇಸರಿ ಶಾಲು ಹಾಕಿ ಘೋಷಣೆ ಕೂಗಿದ್ದಾರೆ. ಬಿಜೆಪಿಯವರಿಗೆ ಬದ್ಧತೆ ಇದೆಯಾ? ಎಂದು ಪ್ರಶ್ನಿಸಿದರು.